ಚೆನ್ನೈ: ವಿರೋಧ ಪಕ್ಷ ಸದಸ್ಯರ ಅನುಪಸ್ಥಿತಿಯಲ್ಲಿ ಇತ್ತೀಚೆಗೆ ನಡೆದ ಸದನ ಪರೀಕ್ಷೆಯನ್ನು ಟೀಕಿಸಿದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಎಂ.ವೀರಪ್ಪ ಮೊಯ್ಲಿ, ಇದು ಪ್ರಜಾಪ್ರಭುತ್ವ ಇತಿಹಾಸದಲ್ಲಿ ಕರಾಳ ದಿನವಾಗಿದ್ದು, ತಮಿಳುನಾಡು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
''ಇದು ದೇಶದ ಸಂವಿಧಾನಕ್ಕೆ ಅತ್ಯಂತ ದುರದೃಷ್ಟಕರವಾಗಿದೆ. ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದು ಅತ್ಯಂತ ಕರಾಳ ದಿನ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಕೊಂಡ ಪಳನಿಸ್ವಾಮಿಯವರಲ್ಲಿ ರಾಜ್ಯಪಾಲರು ಸಂವಿಧಾನದ ಪ್ರಕಾರ ವಿಶ್ವಾಸಮತ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಕೇವಲ ವೋಟು ಪಡೆಯುವುದು ವಿಶ್ವಾಸಮತ ಗಳಿಸಿದಂತೆ ಅಲ್ಲ ಎಂದು ಮೊಯ್ಲಿ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
ರಾಜ್ಯಪಾಲರ ಬಗ್ಗೆ ಟೀಕಿಸಿದ ಅವರು ಸಂವಿಧಾನದ ನಿಯಮ ಪ್ರಕಾರ ಅವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸೋತಿದ್ದಾರೆ ಎಂದರು.
ಮುಖ್ಯಮಂತ್ರಿಯವರು ಪಡೆದ ವಿಶ್ವಾಸಮತದ ಮೇಲೆ ನನಗೆ ಸಂಶಯವಿದೆ. ಅಂತಿಮವಾಗಿ ಮುಖ್ಯಮಂತ್ರಿ ನೇಮಕದ ನಿರ್ಧಾರ ರಾಜ್ಯಪಾಲರಿಗೆ ಬಿಟ್ಟಿದ್ದು. ಪಳನಿಸ್ವಾಮಿಯವರಿಗೆ ಜನರ ಬೆಂಬಲ ಕಡಿಮೆಯಾಗಿದೆ ಎಂದು ಹೇಳಿದರು.