ಕೊಹಿಮಾ: ನಾಗಾಲ್ಯಾಂಡ್ ನಲ್ಲಿ ರಾಜಕೀಯ ಅನಿಶ್ಚಿತತೆ ತಾರಕಕ್ಕೇರಿದ್ದು, ನಾಗಾ ಪೀಪಲ್ಸ್ ಫ್ರಂಟ್ ನೇತೃತ್ವದ ಡೆಮಾಕ್ರಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್ ನ ನಾಯಕರನ್ನು ಆಯ್ಕೆ ಮಾಡಿದ್ದರ ಹಿನ್ನೆಲೆಯಲ್ಲಿ ಸಂಶಯ ಮೂಡಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ನೈಪಿ ರಿಯೊ ಅವರು ಮುಖ್ಯಮಂತ್ರಿ ಟಿ.ಆರ್. ಝೆಲಿಯಂಗ್ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಕಳೆದ ಗುರುವಾರ ಕನಿಷ್ಠ 34 ಎನ್‍ಪಿಎಫ್ ಶಾಸಕರು ತಮ್ಮ ಪಕ್ಷದ ಅಧ್ಯಕ್ಷ ಶ್ರುಹೋಜಲಿ ಲೀಸಿಯೆಟ್ಸು ಅವರನ್ನು ಝೆಲಿಯಂಗ್ ಬದಲಿಗೆ ನೇಮಕ ಮಾಡಲು ಆಯ್ಕೆ ಮಾಡಿದ್ದರು. ಆದರೆ, ಇದೀಗ 45 ಶಾಸಕರು ರಿಯೋ ಅವರನ್ನು ಎನ್‍ಪಿಎಫ್ ಶಾಸಕಾಂಗ್ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದು, ಅವರು ಝೆಲಿಯಂಗ್ ಬದಲಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದ್ದಾರೆ. 60 ಸದಸ್ಯರ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಆಡಳಿತಾರೂಢ ಡೆಮಾಕ್ರೆಟಿಕ್ ಅಲೆಯನ್ಸ್ 48 ಶಾಸಕರ ಬಲವನ್ನು ಹೊಂದಿದ್ದು, ಅವರಲ್ಲಿ ಅಮಾನತ್ತುಗೊಂಡ ಶಾಸಕ ಇಮ್‍ಕಾಂಗ್ ಇಮ್‍ಚಂದ್, ನಾಲ್ವರು ಬಿಜೆಪಿ ಶಾಸಕರು ಹಾಗೂ 8 ಸ್ವತಂತ್ರ ಶಾಸಕರು ಸೇರಿದ್ದಾರೆ.
ಬಿಜೆಪಿಯ ನಾಲ್ವರು ಶಾಸಕರು ರಿಯೋ ನೇತೃತ್ವದ ಹೊಸ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.