ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿಸಲು: ರೈಲ್ವೆ ಇಲಾಖೆಯಿಂದ ರೇಟಿಂಗ್ ಯೋಜನೆ
ನವದೆಹಲಿ: ರೈಲ್ವೆ ಇಲಾಖೆ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿಸುವುದಕ್ಕಾಗಿ ರೈಲ್ವೆ ಮಂಡಳಿ 16 ವಲಯಗಳಲ್ಲಿ ಅತ್ಯುತ್ತಮ ವಲಯಗಳನ್ನು ಗುರುತಿಸಿ ರೇಟಿಂಗ್ ನೀಡುವ ಯೋಜನೆಯನ್ನು ಜಾರಿಗೊಳಿಸಿದೆ.
ರೈಲ್ವೆ ಮಂಡಳಿ 16 ವಲಯಗಳಿಗೆ ನೀಡುವ ರೇಟಿಂಗ್ ಆಧಾರದಲ್ಲಿಯೇ ಆ ನಿರ್ದಿಷ್ಟ ವಲಯದ ಅಧಿಕಾರಿಗಳ ಬಡ್ತಿ ಹಾಗೂ ಇನ್ನಿತರ ವೃತ್ತಿಜೀವನದ ಪ್ರಗತಿ ಅವಲಂಬಿತವಾಗಿರುತ್ತದೆ. ರೈಲ್ವೆ ಮಂಡಳಿ 2016 ನೇ ಸಾಲಿನ ಏಪ್ರಿಲ್-ಡಿಸೆಂಬರ್ ವರೆಗೆ ಮೊದಲ ಹಂತದ ರೇಟಿಂಗ್ ನೀಡಿದ್ದು, ಕೋಲ್ಕತಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆಗ್ನೇಯ ರೈಲ್ವೆ ವಲಯ ಮುಂಚೂಣಿಯಲ್ಲಿದ್ದರೆ (ಮೊದಲ ಸ್ಥಾನದಲ್ಲಿದ್ದರೆ) ಗೋರಖ್ ಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈಶಾನ್ಯ ರೈಲ್ವೆ ಕೊನೆಯ ಸ್ಥಾನದಲ್ಲಿದೆ.
ಅಚ್ಚರಿಯೆಂದರೆ ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಉತ್ತರ ರೈಲ್ವೆ ರೇಟಿಂಗ್ ನ ಕೊನೆಯಿಂದ ಮೂರನೇ ಸ್ಥಾನದಲ್ಲಿದೆ. ಇನ್ನು ರೈಲ್ವೆ ಇಲಾಖೆಯ ಅಧಿಕಾರಿಗಳ ವೇತನ ಪರಿಷ್ಕರಣೆ ( ವೇತನ ಹೆಚ್ಚಳ) ಮಾನದಂಡವನ್ನೂ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಬದಲಾವಣೆ ಮಾಡಿದ್ದು, ರೈಲುಗಳ ಸಮಯಪಾಲನೆ ಹಾಗೂ ರೈಲ್ವೆ ಇಲಾಖೆಗೆ ಅಧಿಕಾರಿಗಳು ತಂದುಕೊಡುವ ಲಾಭದ ಆಧಾರದಲ್ಲಿ ವೇತನ ಹೆಚ್ಚಳವೂ ನಿರ್ಧಾರವಾಗಲಿದೆ.
ಸಂಚರಿಸುವ ಜನಸಂಖ್ಯೆ ಆಧಾರದಲ್ಲಿ ಪ್ರಯಾಣಿಕ ರೈಲುಗಳ ಹಾಗೂ ಸರಕು ಸಾಗಣೆ ಆಧಾರದಲ್ಲಿ ಇತರ ರೈಲುಗಳ ಕಾರ್ಯನಿರ್ವಹಣೆ ಸೇರಿದಂತೆ ರೇಟಿಂಗ್ ನೀಡಲು 17 ಪ್ರಮುಖ ಅಂಶಗಳನ್ನು ಪರಿಗಣಿಸಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos