ಪ್ರಧಾನಿ ನರೇಂದ್ರ ಮೋದಿ-ಬಿಜೆಪಿ ಅಧ್ಯಕ್ಷ ಅಮಿತ್ ಶಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಯೋತ್ಪಾದಕರು ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ವಿವಾದ ಹುಟ್ಟುಹಾಕಿದ್ದಾರೆ. ಪಕ್ಷಕ್ಕೆ ಜನರ ಬೆಂಬಲ ದೊರಕಲು ಉತ್ತರ ಪ್ರದೇಶದ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರನ್ನು ದಾರಿ ತಪ್ಪಿಸುವುದು ರಾಜಕೀಯ ಅಪರಾಧ. ಗುಜರಾತ್ ನ ಇಬ್ಬರು ಜಾದೂಗಾರರಾದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಉತ್ತರ ಪ್ರದೇಶದಲ್ಲಿ ರಾಜಕೀಯದ ಮುಖವನ್ನು ಬದಲಾಯಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದ ಜನರು ರಾಜಕೀಯಕ್ಕೆ ಯಾವತ್ತೂ ಅಗೌರವ ತೋರಿಸುವುದಿಲ್ಲ. ಯಾರೂ ಕೂಡ ಇಲ್ಲಿನ ಮತದಾರರನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅವರಿಗೆ ರಾಜಕೀಯದ ಬಗ್ಗೆ ತಿಳಿದಿದೆ ಎಂದು ಚೌಧರಿ ಹೇಳಿದರು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮಾತಿನ ಸಮರಭೂಮಿಯಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಉತ್ತರ ಪ್ರದೇಶ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ಬದಲಾವಣೆಗಳಾಗಿದ್ದು, ಪ್ರಧಾನಿ ಮೋದಿಯವರು ಮಾಡುತ್ತಿರುವ ಆರೋಪದಲ್ಲಿ ವಾಸ್ತವಾಂಶವಿಲ್ಲ ಎಂದು ಚೌಧರಿ ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಉನ್ನತ ಸ್ಥಾನ ಹೊಂದಿದ್ದರೆ ಅದು ರಾಜ್ಯಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಪ್ರಧಾನಿಯವರು ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ, ಅವರಿಗೆ ಸುಳ್ಳು ಹೇಳುವುದರಿಂದ ಯಾವುದೇ ಪಶ್ಚಾತ್ತಾಪವಾಗುತ್ತಿದೆ ಎಂದು ಅನ್ನಿಸುವುದಿಲ್ಲವೆಂದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯ ಗಳಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಾರೆಯೇ ಎಂದು ಚೌಧರಿ ಪ್ರಶ್ನಿಸಿದರು.
ಪ್ರಧಾನಿ ಮೋದಿಯವರು ನಿನ್ನೆ ಫತೇಪುರ ರ್ಯಾಲಿಯಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಅವರ ವಿರುದ್ಧ ದೂರು ದಾಖಲಿಸಲು ಕಾಂಗ್ರೆಸ್ ನಿರ್ಧರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics