ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಆಜಂಘರ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಅಪ್ರಬುದ್ಧರು ಎಂಬ ಸಂಗತಿ ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ, ಅವರನ್ನು ಉತ್ತರಪ್ರದೇಶ ಚುನಾವಣೆಯಲ್ಲೇಕೆ ಭಾಗಿ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಪ್ರಶ್ನೆ ಹಾಕಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ಉತ್ತರಪ್ರದೇಶದ ಆಜಂಘರ್'ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಶೀಲಾ ದೀಕ್ಷಿತ್ ಅವರೇ, ರಾಹುಲ್ ಗಾಂಧಿಯವರು ಅಪ್ರಬುದ್ಧರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಆದರೂ, ಅವರನ್ನು ಉತ್ತರಪ್ರದೇಶ ಚುನಾವಣೆಯಲ್ಲಿ ಭಾಗಿಯಾಗುವಂತೆ ಏಕೆ ಒತ್ತಡ ಹೇರಲಾಗುತ್ತಿದೆ ಎಂದು ಕೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿಯವರ ಆಡಳಿತವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, 60 ವರ್ಷಗಳ ಆಡಳಿತಾವಧಿಯಲ್ಲಿ ಮಾಡಲಾಗದ್ದ ಕೆಲಸಗಳನ್ನು ಎನ್ ಡಿಎ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ.
ನಂತರ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರಪ್ರದೇಶ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ಆದರೆ, ಇಲ್ಲಿನ ಆಡಳಿತಾರೂಢ ಸರ್ಕಾರವೇ ಯೋಜನೆಯನ್ನು ಜಾರಿಗೆ ತರಲು ಆಸಕ್ತಿಯನ್ನು ತೋರುತ್ತಿಲ್ಲ. ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಎರಡೂ ಪಕ್ಷಗಳೂ ರಾಜ್ಯವನ್ನು ನಾಶಪಡಿಸುತ್ತಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಕೊಲೆ, ಲೂಟಿ, ದರೋಡೆ ಹಾಗೂ ಅಪಹರಣಗಳಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು, ರಾಹುಲ್ ಗಾಂಧಿಯವರು ಪ್ರಬುದ್ಧರಾಗಿಲ್ಲ. ಅವರ ವಯಸ್ಸು ಅವರು ಪ್ರಬುದ್ಧರಾಗಲು ಬಿಡುತ್ತಿಲ್ಲ. ಪ್ರಬುದ್ಧರಾಗಲು ಅವರಿಗೆ ದಯವಿಟ್ಟು ಕಾಲಾವಕಾಶವನ್ನು ನೀಡಿ. ರೈತರ ಸಂಕಷ್ಟಗಳ ಬಗ್ಗೆ ರಾಹುಲ್ ಮಾತ್ರ ಮಾತನಾಡಿದ್ದಾರೆ. ಇದೀಗ ಅವರು ಬಹಳ ದೂರ ಸಾಗಿ ಬಂದಿದ್ದಾರೆ. ಪ್ರಧಾನಿಯಾಗುವ ಅವಕಾಶ ಅವರಿಗೆ ಮುಂದೆ ಬರಲಿದೆ. ಅವರು ಈಗ ರಾಜಕೀಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ ಮನಸ್ಸಿಗೆ ತೋಚಿದ್ದನ್ನು ಹೇಳುತ್ತಾರೆ. ಇದು ಒಳ್ಳೆಯ ಲಕ್ಷಣಗಳು ಎಂಬುದು ನನ್ನ ಅಭಿಪ್ರಾಯ. ರಾಹುಲ್ ಸಹಜವಾಗಿ ಮಾತನಾಡುವುದು ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics