ನವದೆಹಲಿ: 3 ವರ್ಷದ ಬಾಲಕಿಯ ಮೇಲೆ 16 ವರ್ಷದ ಅಪ್ರಾಪ್ತ ಬಾಲಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆದಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಿರುವ ಆರೋಪಿ, ನಿರ್ಜನ ಪ್ರದೇಶಕ್ಕೆ ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ನಂತರ ವಿಚಾರ ಬೆಳಕಿಗೆ ಬರುತ್ತದೆ ಎಂಬ ಭಯದಿಂದ ಮಗುವಿನ ಕತ್ತುಹಿಸುಕಿ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ಬಾಲಕಿಯ ಪೋಷಕರು ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ನಡೆದ ದಿನದಂದು ಮಗುವನ್ನು ಮನೆಯ ಮುಂದೆ ಆಟವಾಡಲು ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ಬಾಲಕಿಯನ್ನು ಎತ್ತಿಕೊಂಡು ಹೋಗಿದ್ದಾನೆ. ಕೆಲಸ ಸಮಯದ ಬಳಿಕ ಪೋಷಕರು ಬಂದು ನೋಡಿದಾಗ ಬಾಲಕಿ ಸ್ಥಳದಲ್ಲಿ ಇರಲಿಲ್ಲ. ಗಾಬರಿಗೊಂಡು ಪೋಷಕರು ಹುಡುಕಾಟ ನಡೆಸಿದ್ದಾರೆ. ಗಂಟೆಗಳು ಕಳೆದರೂ ಮಗು ಪತ್ತೆಯಾಗಿರಲಿಲ್ಲ.
ಹತ್ಯೆ ಮಾಡಿದ ಬಳಿಕ ಬಾಲಕ ಮಗುವಿನ ದೇಹವನ್ನು ಹೂತಿಹಾಕಲು ಪ್ರಯತ್ನ ನಡೆಸುತ್ತಿರಬೇಕಾದರೆ, ಸ್ಥಳೀಯರು ಆತನನ್ನು ನೋಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಪೋಷಕರು ಸ್ಥಳಕ್ಕೆ ಬಂದಾಗ ವಿಚಾರ ತಿಳಿದಿದೆ.
ಪ್ರಸ್ತುತ ಆರೋಪಿಯ ವಿರುದ್ಧ ಪೊಲೀಸರು ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.