ದೇಶ

ನೋಟುಗಳ ನಿಷೇಧ ಒಂದು ಹಗರಣ:ಪಿ.ಚಿದಂಬರಂ

Sumana Upadhyaya
ಹೈದರಾಬಾದ್: ನೋಟುಗಳ ನಿಷೇಧದ ನಂತರ ದೇಶದ ಆರ್ಥಿಕತೆ ಸಹಜತೆಗೆ ಮರಳಲು 12ರಿಂದ 18 ತಿಂಗಳ ಕಾಲ ಹಿಡಿಯಬಹುದು ಎಂದು ಕೇಂದ್ರ ಹಣಕಾಸು ಖಾತೆ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. 
ತಮ್ಮ ಪುಸ್ತಕ ಫಿಯರ್ ಲೆಸ್ ಇನ್ ಅಪೊಸಿಷನ್: ಪವರ್ ಅಂಡ್ ಅಕೌಂಟೆಬಿಲಿಟಿ ಬಿಡುಗಡೆಯ ನಂತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನೋಟುಗಳ ಅಮಾನ್ಯತೆಯನ್ನು ಹಗರಣ ಎಂದು ಬಣ್ಣಿಸಿದರು. ದೇಶದಲ್ಲಿ ಸಂಪೂರ್ಣವಾಗಿ ಡಿಜಿಟಲ್ ಪಾವತಿ ವಿಧಾನವನ್ನು ಕೂಡ ಅವರು ವಿರೋಧಿಸಿದರು.
ತೆಗೆದುಕೊಂಡವರಿಂದ ಖರೀದಿದಾರರವರೆಗೆ 100 ರೂಪಾಯಿ ನೋಟು ಒಂದು ದಿನದಲ್ಲಿ 10 ವಹಿವಾಟುಗಳಲ್ಲಿ 10 ಜನರ ಕೈಗೆ ಹೋದರೆ ಯಾವುದೇ ಮಧ್ಯವರ್ತಿಗಳಿಗೆ ಅದರಿಂದ ಲಾಭ ಸಿಗುವುದಿಲ್ಲ. ಖರೀದಿದಾರ 100 ರೂಪಾಯಿ ನೋಟು ನೀಡಿ ಅದಕ್ಕೆ ಬೆಲೆ ಬಾಳುವ ವಸ್ತುವನ್ನೋ ಅಥವಾ ಸೇವೆಯನ್ನೋ ಪಡೆಯುತ್ತಾನೆ. ಮಾರಾಟಗಾರನಿಗೆ 100 ರೂಪಾಯಿ ದೊರಕುತ್ತದೆ. ಇದರಿಂದ ಯಾವುದೇ ಮಧ್ಯವರ್ತಿಗಳಿಗೆ ಲಾಭವಿಲ್ಲ ಎಂದರು.
ಇದೇ ವಹಿವಾಟನ್ನು ಡಿಜಿಟಲ್ ಪಾವತಿ ವಿಧಾನದಿಂದ ಮಾಡಿದರೆ ಪ್ರತಿ ವಹಿವಾಟಿಗೆ ಮಧ್ಯವರ್ತಿಗಳಿಂದ ಶೇಕಡಾ 1.5ರಷ್ಟು ದರ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ 100 ರೂಪಾಯಿ 10 ಕೈಗಳಿಗೆ ಹೋಗಿ 10 ವಹಿವಾಟುಗಳು ನಡೆದರೆ ಮಧ್ಯವರ್ತಿಗಳಿಗೆ 15 ರೂಪಾಯಿ ಲಾಭವಾಗುತ್ತದೆ ಎಂದು ಹೇಳಿದರು.
ಪ್ರತಿದಿನ ಡಿಜಿಟಲ್ ಪಾವತಿ ಮೂಲಕ 1 ಲಕ್ಷ ಕೋಟಿ ರೂಪಾಯಿ  ವಹಿವಾಟು ನಡೆಯುತ್ತದೆ.  ಮಧ್ಯವರ್ತಿಗಳಿಗೆ 1,500 ಕೋಟಿ ರೂಪಾಯಿ ದೊರಕುತ್ತದೆ. ಡಿಜಿಟಲ್ ಪಾವತಿ ವಿಧಾನ ಬಂದರೆ ವಯೋವೃದ್ಧರೊಬ್ಬರು ಮೆಡಿಕಲ್ ಗೆ ಹಣ ತೆಗೆದುಕೊಂಡು ಔಷಧಿ ಕೊಂಡುಕೊಳ್ಳಲು ಹೋದರೆ ಅಲ್ಲಿ ನಿರಾಕರಿಸುತ್ತಾರೆ. ಹೊಸ 2,000ದ ನೋಟುಗಳನ್ನು ನಾನು ನೋಡುವ ಮುಂಚೆ ಹೊಸ ನೋಟುಗಳ ಕಟ್ಟು ತಮಿಳುನಾಡಿನ ಮುಖ್ಯ ಕಾರ್ಯದರ್ಶಿಯವರ ನಿವಾಸದಲ್ಲಿ ಕಂಡುಬಂದಿತ್ತು. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಹೊಸ ನೋಟುಗಳು ಹೇಗೆ ಸಿಕ್ಕಿದವು ಎಂದು ಇದುವರೆಗೆ ಆರ್ ಬಿಐ ಸೇರಿದಂತೆ ಯಾರೂ ಉತ್ತರ ಕೊಟ್ಟಿಲ್ಲ. ಹಾಗಾಗಿ ನಾನಿದನ್ನು ಹಗರಣ ಎಂದು ಹೇಳುತ್ತೇನೆ ಎಂದರು.
ಸಾರ್ವಜನಿಕರು ನೋಟು ಅಮಾನ್ಯತೆಗೆ ನೀಡಿರುವ ಬೆಂಬಲದ ಕುರಿತ ಸಮೀಕ್ಷೆಗಳನ್ನು ಅವರು ಟೀಕಿಸಿದರು. ಸಮೀಕ್ಷೆಗಳು ಅಮೆರಿಕಾ ಅಧ್ಯಕ್ಷರಾಗಿ ಹಿಲರಿ ಕ್ಲಿಂಟನ್ ಆಯ್ಕೆಯಾಗುತ್ತಾರೆ ಎಂದು ಹೇಳಿದ್ದವು. ಸಮೀಕ್ಷೆಗಳನ್ನು ನಂಬದಿರುವುದು ಒಳ್ಳೆಯದು ಎಂದರು.
ಈ ವರ್ಷದ ಕೇಂದ್ರ ಬಜೆಟ್ ಬಗ್ಗೆ ಟೀಕಿಸಿದ ಚಿದಂಬರಂ, ಬಜೆಟ್ ಅಂದಾಜು ಮತ್ತು ಪರಿಷ್ಕೃತ ಅಂದಾಜು ಬಜೆಟ್ ನಲ್ಲಿ ಒಂದೇ ಆಗಿತ್ತು. ನೋಟು ನಿಷೇಧದ ನಂತರ ಹೆಚ್ಚುವರಿ ಆದಾಯ ಅಥವಾ ಹೆಚ್ಚುವರಿ ಖರ್ಚಿನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊಂದಲವಿದೆ ಎಂದು ಟೀಕಿಸಿದರು.
SCROLL FOR NEXT