ದೇಶ

ಸೇನಾ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: 18 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

Sumana Upadhyaya
ಥಾಣೆ: ಸೇನಾ ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮತ್ತು ನಾಗ್ಪುರಗಳಿಂದ ಕನಿಷ್ಠ 18 ಮಂದಿಯನ್ನು ಥಾಣೆ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿನ್ನೆ ಸಾಯಂಕಾಲದ ಹೊತ್ತಿಗೆ ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಗ್ಗೆ ವರದಿಯಾಗಿತ್ತು. ಪರೀಕ್ಷೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆಯಬೇಕಾಗಿತ್ತು. ಪೊಲೀಸರು ನಾಗ್ಪುರ, ಥಾಣೆ, ನಾಸಿಕ್, ಗೋವಾ ಮೊದಲಾದ ಕಡೆ ದಾಳಿ ನಡೆಸಿದ್ದಾರೆ.
ಕೆಲವು ಅಭ್ಯರ್ಥಿಗಳು ನಿನ್ನೆ ರಾತ್ರಿಯೇ ಕೆಲವು ಹೊಟೇಲ್, ಲಾಡ್ಜ್ ಗಳಲ್ಲಿ ಕುಳಿತುಕೊಂಡು ಉತ್ತರ ಪತ್ರಿಕೆ ಬರೆದಿದ್ದಾರೆ ಎಂದು ತಿಳಿದುಬಂತು. ದಾಳಿ ನಡೆಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಸುಮಾರು 350 ಮಂದಿ ವಿದ್ಯಾರ್ಥಿಗಳನ್ನು ಹಿಡಿದಿದ್ದಾರೆ.
ಸೇನಾ ಕೇಂದ್ರ ಕಚೇರಿಗೆ ಮಾಹಿತಿ ತಲುಪಿದ್ದು ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಅನೇಕ ಕೇಸುಗಳನ್ನು ದಾಖಲಿಸಲಾಗಿದೆ. ಸೇನೆಯ ಹಿರಿಯ ಸಿಬ್ಬಂದಿ ಇದರಲ್ಲಿ ಶಾಮೀಲಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ನಿಗದಿಯಂತೆ ಮಹಾರಾಷ್ಟ್ರದ 9 ಕಡೆಗಳಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಸೇನಾ ನೇಮಕಾತಿಗೆ ಸಂಬಂಧಪಟ್ಟಂತೆ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ್ದರಿಂದ ಪರೀಕ್ಷೆ ರದ್ದಾಗಿದೆ. ಮುಂದಿನ ದಿನಾಂಕ ಪ್ರಕಟವಾಗಿಲ್ಲ.
SCROLL FOR NEXT