ದೇಶ

ನಿಮ್ಮದೇ ಪ್ರಧಾನಿಯನ್ನು 'ಕತ್ತೆ' ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಳ್ಳೆಯ ಉದಾಹರಣೆ: ವೆಂಕಯ್ಯ

Manjula VN
ನವದೆಹಲಿ: ನಿಮ್ಮದೇ ದೇಶದ ಪ್ರಧಾನಮಂತ್ರಿಗಳನ್ನು ಕತ್ತೆ ಎನ್ನುತ್ತಿರುವಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ ಎಂದು  ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ ಹೇಳಿದ್ದಾರೆ. 
ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದಿದ್ದ ಘರ್ಷಣೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ತಮ್ಮದೇ ದೇಶದ ಪ್ರಧಾನಮಂತ್ರಿಗಳನ್ನು ಕತ್ತೆ ಎಂದು ಕರೆಯುತ್ತಿರುವುದಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇಲ್ಲ ಎಂದು ಹೇಳಿದ್ದಾರೆ. 
ದೇಶದಲ್ಲಿದ್ದುಕೊಂಡೇ ನಿಮ್ಮದೇ ದೇಶದ ಪ್ರಧಾನಮಂತ್ರಿಗಳನ್ನು ಕತ್ತೆಗೆ ಹೋಲಿಕೆ ಮಾಡುತ್ತಿದ್ದೀರಿ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ಹೇಗೆ ಹೇಳುತ್ತಿರಾ? ಮತ್ತೊಬ್ಬರ ಅನಿಸಿಕೆ ಹಾಗೂ ಅಭಿಪ್ರಾಯಗಳಿಗೆ ಗೌರವ ನೀಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ. ಮೂಲಭೂತ ಹಕ್ಕುಗಳಿಗೆ ಕಾಂಗ್ರೆಸ್ ಗೌರವ ನೀಡುತ್ತಿಲ್ಲ. ಇದೀಗ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲ ಉಗ್ರಗಾಮಿ ಪಡೆಗಳು ಹಾಗೂ ಎಡಪಂಥೀಯರೊಡನೆ ಕೈಜೋಡಿಸಿರುವ ಕಾಂಗ್ರೆಸ್ ಹಿಂಸಾಚಾರ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ. 
ವಿದ್ಯಾರ್ಥಿಗಳ ಆಂತರಿಕ ವಿಚಾರಗಳಲ್ಲಿ ಕಾಂಗ್ರೆಸ್ ಮೂಗು ತೂರಿಸುತ್ತಿದ್ದು, ರಾಜಕೀಯ ಬಣ್ಣ ನೀಡುತ್ತಿದೆ. ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ, ಅಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಹಿಂಸಾಚಾರ ಸೃಷ್ಟಿಸುವುದು ಇತಿಹಾಸದಿಂದಲೂ ನಡೆದುಕೊಂಡು ಬಂದಿರುವ ಬೆಳವಣಿಗೆಯಾಗಿದೆ. 
ಕೆಲ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳಿಗೆ ರಾಜಕೀಯ ಬಣ್ಣ ನೀಡಲು ಕಾಂಗ್ರೆಸ್ ಹಾಗೂ ಇನ್ನಿತರೆ ಪಕ್ಷಗಳು ನಡೆಸುತ್ತಿರುವ ಶ್ರಮವನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಸಾಮಾಜಿಕ ಗದ್ದಲವನ್ನುಂಟು ಮಾಡಿ ಭಾರತದಲ್ಲಿರುವ ಜನರ ಮನಸ್ಸಿಗೆ ನೋವುಂಟು ಮಾಡಲು ಯುವಜನರನ್ನು ತಪ್ಪು ಹಾದಿಗೆ ಎಳೆಯಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನವೇ ನೀಡಿದ್ದು, ಅದನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅಸಮ್ಮತಿ ಹಾಗೂ ಒಗ್ಗಟ್ಟು ಒಡೆಯುವಿಕೆಯಲ್ಲಿ ಭಿನ್ನತೆಗಳಿವೆ. 
ಅಸಮ್ಮತಿಯನ್ನು ಒಪ್ಪಿಕ್ಕೊಳ್ಳಬಹುದು. ಆದರೆ ಒಗ್ಗಟ್ಟು ಒಡೆಯುವಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ತಮಗಾಗಿರುವ ಸೋಲು ಹಾಗೂ ಪ್ರಧಾನಮಂತ್ರಿಗಳ ಜನಪ್ರಿಯತೆಯನ್ನು ಜೀರ್ಣಿಸಿಕೊಳ್ಳಲಾಗದ ಕೆಲ ವಿರೋಧಿಗಳು ಈ ರೀತಿಯ ಯತ್ನಗಳನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ನಡುವಿನ ಘರ್ಷಣೆ ಆಯಾ ವಿಶ್ವವಿದ್ಯಾಲಯಗಳ ಆಂತರಿಕ ವಿಚಾರಗಳಿಗೆ ಸಂಬಂಧಿಸಿದ್ದು, ಇದಕ್ಕೆ ರಾಜಕೀಯ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ 'ಕಾಶ್ಮೀರ ಆಜಾದಿ' ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಸ್ವಾತಂತ್ರ್ಯ ಕುರಿತು ಘೋಷಣೆ ಕೂಗಿದರೆ, ಅದು ಪಾಕಿಸ್ತಾನ ಪರ ಭಾವನೆಗಳನ್ನು ಸೂಚಿಸುತ್ತದೆ. 
ಕಾಶ್ಮೀರದ ಆಜಾದಿಯ ಅರ್ಥವೇನು?...ದೇಶದ ಏಕತೆಗಾಗಿ ಸಾವಿರಾರು ಯೋಧರು ಹುತಾತ್ಮರಾಗುತ್ತಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ವ್ಯಕ್ತಿಯೊಬ್ಬ ವಕೀಲಾತ್ತು ಕೆಲಸವನ್ನು ಹೇಗೆ ಮಾಡುತ್ತಾನೆ? ಪ್ರಜಾಪ್ರಭುತ್ವದ ಪ್ರತೀಕವಾದ ಸಂಸತ್ತಿನ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರು ಅಂತಹ ವ್ಯಕ್ತಿಯ ವಾರ್ಷಿಕೋತ್ಸವಕ್ಕಾಗಿ ಹೇಗೆ ಆಗ್ರಹಿಸುತ್ತಾರೆ? ಪ್ರತ್ಯೇಕತಾವಾದಕ್ಕೆ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.  
SCROLL FOR NEXT