ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಡಿಮೆ ಘಾಸಿ ಉಂಟುಮಾಡಬಲ್ಲ ಸುಧಾರಿತ ಪೆಲ್ಲೆಟ್ ಗನ್ ಗಳನ್ನು ಬಳಕೆ ಮಾಡುವುದಾಗಿ ಸಿಆರ್ ಪಿಎಫ್ ಡಿಜಿ ದುರ್ಗಾ ಪ್ರಸಾದ್ ಮಂಗಳವಾರ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಪೆಲ್ಲೆಟ್ ಗನ್ ಬಳಕೆ ಮೇಲಿನ ನಿರ್ಧಾರವನ್ನು ತಿದ್ದುಪಡಿ ಮಾಡಲಾಗಿದ್ದು, ಪ್ರಸ್ತುತ ಇರುವ ಪೆಲ್ಲೆಟ್ ಗನ್ ಗಳ ಬದಲಿಗೆ ಸುಧಾರಿತ ಮತ್ತು ಕಡಿಮೆ ಅಪಾಯವನ್ನುಂಟು ಮಾಡುವ ಪೆಲ್ಲೆಟ್ ಗನ್ ಗಳನ್ನು ಬಳಕೆ ಮಾಡುವುದಾಗಿ ತಿಳಿಸಿದ್ದಾರೆ. ಸುಧಾರಿತ ಪೆಲ್ಲೆಟ್ ಗನ್ ಗಳಲ್ಲಿ ಡಿಫ್ಲೆಕ್ಟರ್ ಗಳಿದ್ದು, ಇವು ಪೆಲ್ಲೆಟ್ ಗನ್ ಗಳಷ್ಟು ಆಘಾತವನ್ನುಂಟು ಮಾಡುವುದಿಲ್ಲ. ಪೆಲ್ಲೆಟ್ಸ್ ಗಳ ವೇಗಕ್ಕೆ ಮಿತಿಹೇರಿ ಕಡಿಮೆ ಘಾಸಿ ಮಾಡುತ್ತವೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಈಗಾಗಲೇ ಯೋಧರಿಗೆ ಪೆಲ್ಲೆಟ್ ಗನ್ ಗಳಿಗೆ ಡಿಫ್ಲೆಕ್ಟರ್ ಗಳನ್ನು ಅಳವಡಿಸಿಕೊಳ್ಳುವ ಕುರಿತು ತರಬೇತಿ ನೀಡಲಾಗುತ್ತಿದ್ದು, ಶೀಘ್ರದಲ್ಲೇ ಕಾಶ್ಮೀರದಲ್ಲಿರುವ ಎಲ್ಲ ವಿಭಾಗದ ಯೋಧರಿಗೆ ಡಿಫ್ಲೆಕ್ಟರ್ ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ದುರ್ಗಾ ಪ್ರಸಾದ್ ತಿಳಿಸಿದರು.
ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಳೆದ ವರ್ಷ ನಡೆದ ಕಾಶ್ಮೀರ ಹಿಂಸಾಚಾರದಲ್ಲಿ ನೂರಾರು ನಾಗರೀಕರು ಪೆಲ್ಲೆಟ್ ಗನ್ ದಾಳಿಯಲ್ಲಿ ಗಾಯಗೊಂಡ ಬಳಿಕ ಪೆಲ್ಲೆಟ್ ಗನ್ ನಿಷೇಧಿಸುವಂತೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಅಂದು ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪೆಲ್ಲೆಟ್ ಗನ್ ಬದಲಿಗೆ ಮೆಣಸಿನ ಪುಡಿ ಆಧಾರಿತ ಮಾರಕವಲ್ಲದ ಯುದ್ಧ ಸಾಮಗ್ರಿಯನ್ನು ಹೊಂದಿರುವ ಪಾವಾ ಶೆಲ್ ಗಳನ್ನು ಹಿಂಸಾತ್ಮಕ ಪ್ರತಿಭಟನೆಗಳನ್ನು ನಿಯಂತ್ರಿಸಲು ಬಳಕೆ ಮಾಡುವಂತೆ ಸೂಚಿಸಿದ್ದರು.