ಕೋಲ್ಕತ್ತಾ: ಮಕ್ಕಳ ಕಳ್ಳ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಜೂಹಿ ಚೌಧರಿಯನ್ನು ಬಂಧಿಸಿದ್ದಾರೆ.
ಮಕ್ಕಳ ಕಳ್ಳ ಸಾಗಾಣೆ ಪ್ರಕರಣದಲ್ಲಿ ಜೂಹಿ ಚೌಧರಿ ಹೆಸರು ಕೇಳಿಬರುತ್ತಿದ್ದಂತೆ ಜೂಹಿ ತಲೆ ಮರೆಸಿಕೊಂಡಿದ್ದರು. ಕಳೆದ ರಾತ್ರಿ ಭಾರತ-ನೇಪಾಳ ಗಡಿಯಲ್ಲಿ ಜೂಹಿ ಚೌಧರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಟಾಸಿಯಾದಲ್ಲಿ ತಲೆಮರೆಸಿಕೊಂಡಿದ್ದ ಜೂಹಿ ಚೌಧರಿಯನ್ನು ಮೊಬೈಲ್ ಫೋನ್ ಟವರ್ ಮೂಲಕ ಪತ್ತೆ ಹಚ್ಚಿ ಬಂಧಿಸಲಾಗಿದೆ.
ಕಳೆದ ನವೆಂಬರ್ ನಲ್ಲಿ ಜಲ್ಪಾಯ್ ಗುರಿಯ ಅನಾಥ ಮಕ್ಕಳ ವಸತಿ ನಿಲಯದ ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ. ಕಳ್ಳ ಸಾಗಾಣೆ ಮಾಡಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿತ್ತು.
ಈ ಸಂಬಂಧ ವಸತಿ ನಿಲಯದ ಮುಖ್ಯಸ್ಥ ಚಂದನ್ ಚಕ್ರವರ್ತಿ ಎಂಬುವರನ್ನು ಬಂಧಿಸಿ ಸಿಐಡಿ ಪೊಲೀಸರು ವಿಚಾರಣೆ ನಡೆಸಿದಾಗ ಜೂಹಿ ಹೆಸರನ್ನು ಆತ ಬಾಯ್ಬಿಟ್ಟಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ.