ದೇಶ

ಭೂ ಕಾನೂನು ಬದಲಾವಣೆಗೆ ಆಕ್ರೋಶ: ಜಾರ್ಖಾಂಡ್ ಸಿಎಂ ಮೇಲೆ ಶೂ ಎಸೆದ ಪ್ರತಿಭಟನಾಕಾರರು

Manjula VN

ಜಮ್ಶೆಡ್ಪುರ: ಹುತಾತ್ಮ ಬುಡಕಟ್ಟು ಜನರ ಸ್ಮಾರಕಗಳಿಗೆ ಗೌರವ ಸಲ್ಲಿಸುವ ವೇಳೆ ಜಾರ್ಖಾಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಮೇಲೆ ಶೂ ಎಸೆದಿರುವ ಘಟನೆಯೊಂದು ಭಾನುವಾರ ನಡೆದಿದೆ.

ಭೂಮಿ ಕಾನೂನು ಬದಲಾವಣೆ ಮಾಡಿದ್ದಕ್ಕಾಗಿ ಸ್ಥಳೀಯ ಬುಡಕಟ್ಟು ಜನಾಂಗದವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಜನವರಿ 1, 1948 ರಂದು ಪೊಲೀಸರ ಗುಂಡಿಗೆ ಬಲಿಯಾದ ಜನರಿಗೆ ಗೌರವ ಸಲ್ಲಿಸುವ ಸಲುವಾಗಿ ರಘುಬರ್ ದಾಸ್ ಅವರು ಖರ್ಸಾವನ್ ಗೆ ಭೇಟಿ ನೀಡಿದ್ದರು.

ಬುಡಕಟ್ಟು ಜನಾಂಗದ ಜಲ-ಅರಣ್ಯ-ಭೂಮಿಯ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ಹೇಳಿ ಬುಡಕಟ್ಟು ಜನಾಂಗದವರು ತಮ್ಮ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಆದಿ ಸಂಸ್ಕೃತಿ ಎವಂ ವಿಕಾಸ್ ಸಂಸ್ಥಾನದ ಬ್ಯಾನರ್ ಹಿಡಿದು ಬಂದಿದ್ದ ಕೆಲ ಜನರು, ದಾಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಬಾರದು ಎಂದು ತಡೆಹಿಡಿದು ಕುಳಿತು ಪ್ರತಿಭಟನೆ ನಡೆಸುತ್ತಿದ್ದರು.

ಇದರ ನಡುವೆಯೂ ರಘುಬರ್ ದಾಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ತೀವ್ರ ಆಕ್ರೋಶಗೊಂಡ ಪ್ರತಿಭಟನಾನಿರತ ಜನರು ಕಾರ್ಯಕ್ರಮಕ್ಕೆಂದು ಹಾಕಲಾಗಿದ್ದ ಕುರ್ಚಿಗಳನ್ನು ಧ್ವಂಸಗೊಳಿಸಿದರು. ಅಲ್ಲದೆ, ರಘುಬರ್ ದಾಸ್ ಅವರಿಗೆ ಕಪ್ಪು ಬಾವುಟವನ್ನು ಪ್ರದರ್ಶಿಸಿ ಮುಖ್ಯಮಂತ್ರಿಗಳೇ ಹಿಂತಿರುಗಿ ಹೋಗಿ ಎಂದು ಘೋಷಣೆ ಕೂಗಿದ್ದಾರೆ ಅಲ್ಲದೆ, ಶೂ ಎಸೆಯುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಹುತಾತ್ಮ ಬುಡಕಟ್ಟು ಜನರ ಕುಟುಂಬಗಳಿಗೆ ಗೌರವ ಸಲ್ಲಿಸುವ ಸಲುವಾಕಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನೆ ತೀವ್ರಗೊಂಡಿದ್ದರಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಕೆಟ್ಟದು ಹಾಗೂ ರಾಜಕೀಯ ಎಂಬುದಕ್ಕೆ ಘಟನೆಯೊಂದು ಉದಾಹರಣೆಯಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆಂದು ರಘುಬರ್ ದಾಸ್ ಅವರು ಹೇಳಿದ್ದಾರೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಬರ್ಕುನ್ವಾರ್ ಗಾಗ್'ರಾಯ್ ಅವರು, ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ನಾಶ ಪಡಿಸಿದ್ದಕ್ಕಾಗಿ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಹುತಾತ್ಮರೆಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಹುತಾತ್ಮರಿಗೆ ಅಗೌರವವನ್ನು ಸಲ್ಲಿಸಲಾಗಿದೆ. ಕಳೆದ 47 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹುತಾತ್ಮರಿಗೆ ದಾಸ್ ಅವರು ಪರಿಹಾರವನ್ನು ಘೋಷಣೆ ಮಾಡಿದ್ದರು. ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದ್ದು, ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT