ದೇಶ

ಕಾಶ್ಮೀರ ಹಿಂಸಾಚಾರ: ಆಡಳಿತ ವೈಫಲ್ಯದ ಹೊಣೆ ಹೊತ್ತುಕೊಳ್ಳಿ- ಮೆಹಬೂಬಾಗೆ ಒಮರ್ ಅಬ್ದುಲ್ಲಾ

Manjula VN

ಶ್ರೀನಗರ: ಕಳೆದ 6 ತಿಂಗಳಿನಲ್ಲಿ ಕಾಶ್ಮೀರದಲ್ಲಿ ಸೃಷ್ಟಿಯಾಗಿದ್ದ ಹಿಂಸಾಚಾರದಲ್ಲಿ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಮೃತರ ಹೊಣೆಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೊತ್ತುಕೊಳ್ಳಬೇಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಮಂಗಳವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಡೆಯುತ್ತಿರುವ ಎರಡನೇ ದಿನದ ಬಜೆಟ್ ಅಧಿವೇಶನದಲ್ಲಿ ಮಾತನಾಡಿರುವ ಅವರು, 2008-2010 ರಲ್ಲೂ ಕಾಶ್ಮೀರದಲ್ಲಿ ಹಿಂಸಾಚಾರ ನಡೆದಿತ್ತು. ಆದರೆ, ಈ ವೇಳೆ ವಿರೋಧ ಪಕ್ಷಗಳನ್ನು ದೂಷಿಸಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದು, ಮೆಹಬೂಬಾ ಅವರು ಹೊಣೆಹೊತ್ತುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.  

2010ರ ಸಂದರ್ಭದ ಪರಿಸ್ಥಿತಿಯನ್ನು 2016ಕ್ಕೆ ಹೋಲಿಕೆ ಮಾಡಬಾರದು. ಹಿಂಸಾಚಾರ ಸಂಬಂಧ ನಾವು ಎಂದಿಗೂ ಪಾಕಿಸ್ತಾನವನ್ನಾಗಲೀ ಅಥವಾ ವಿರೋಧ ಪಕ್ಷಗಳನ್ನಾಗಲೀ ದೂಷಿಸಿರಲಿಲ್ಲ. 2010ರಲ್ಲಿ ಯಾವುದೇ ಅಧಿಕಾರಿಗಳನ್ನು ನಾನು ದೂಷಿಸಿರಲಿಲ್ಲ. ನಾವು ತಪ್ಪು ಮಾಡಿದ್ದ ಕಾರಣ ನಮ್ಮ ತಪ್ಪನ್ನು ನಾವು ಒಪ್ಪಿಕೊಂಡಿದ್ದೆವು. ಇದೀಗ ಮೆಹಬೂಬಾ ಮುಫ್ತಿಯವರೂ ಕೂಡ ಮೃತರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಿದೆ.

ಜುಲೈ.8 ರಂದು ಬುರ್ಹಾನ್ ವಾನಿಯನ್ನು ಹತ್ಯೆ ಮಾಡಿದ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿತ್ತು. ಆಡಳಿತದ ವೈಫಲ್ಯತೆಯ ಹೊಣೆಯನ್ನು ಮುಖ್ಯಮಂತ್ರಿಗಳು ಹೊತ್ತುಕೊಳ್ಳಬೇಕಿದೆ.

ಮೆಹಬೂಬಾ ಮುಫ್ತಿಯವರೇ ನೀವು ಜವಾಹರ್ ಲಾಲ್ ನೆಹರು, ಶೇಖ್ ಅಬ್ಲುಲ್ಲಾ, ಇಂದಿರಾ ಗಾಂಧಿಯವರನ್ನು ದೂಷಣೆ ಮಾಡಿದ್ದಿರಿ...ಆದರೆ, ಎಂದಾದರೂ ನಿಮ್ಮ ತಪ್ಪಿನ ಬಗ್ಗೆ ಮಾತನಾಡಿದ್ದೀರಾ...? ಕಾಶ್ಮೀರ ಇತಿಹಾಸದಲ್ಲಿಯೇ ಇದೇ ಮೊದಲು ದೀರ್ಘಕಾಲಿಕವಾಗಿ ಕರ್ಫ್ಯೂವನ್ನು ಜಾರಿಗೊಳಿಸಲಾಗಿತ್ತು. ಈ ಬಗ್ಗೆ ಮೆಹಬೂಬಾ ಮುಫ್ತಿಯವರು ಜನರಿಗೆ ಸ್ಪಷ್ಟನೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

SCROLL FOR NEXT