ಬೆಂಗಳೂರು: ನೂತನ ಲೋಕಾಯುಕ್ತ ನೇಮಕ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಹೊಸ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದಾರಾಮಯ್ಯ, ಮುಖ್ಯ ನ್ಯಾಯಮೂರ್ತಿ ಎಸ್ ಕೆ ಮುಖರ್ಜಿ, ವಿಧಾನಸಭೆ ಸಭಾಧ್ಯಕ್ಷ ಕೆಬಿ ಕೋಳಿವಾಡ, ವಿಧಾನಪರಿಷತ್ ಸಭಾಧ್ಯಕ್ಷ ಡಿಹೆಚ್ ಶಂಕರ ಮೂರ್ತಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಅವರನ್ನೊಳಗೊಂಡ ಸಮಿತಿ(ಕೊಲಿಜಿಯಂ) ಹೊಸ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲಿದೆ.
ಲೋಕಾಯುಕ್ತ ಹುದ್ದೆಗೆ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ ಮಾಜಿ ಕರ್ನಾಟಕ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿಹೆಚ್ ವಘೇಲಾ ಅವರ ಹೆಸರನ್ನೂ ಸರ್ಕಾರ ಪರಿಗಣಿಸಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ, ಸುಪ್ರೀಂ ಕೋರ್ಟ್ ನ ನ್ಯಾ. ವಿಕ್ರಮ್ ಜೀತ್ ಸೇನ್ ಅವರ ಹೆಸರನ್ನು ಸೂಚಿಸಿದ್ದರು. ಆದರೆ ಸಿದ್ದರಾಮಯ್ಯ ಹಾಗೂ ಈ ಹಿಂದೆ ವಿಧಾನಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ನ್ಯಾ.ನಾಯಕ್ ಅವರ ಹೆಸರನ್ನು ಸೂಚಿಸಿದ್ದರು ಎಂದು ತಿಳಿದುಬಂದಿದೆ.