ಮುಂಬೈ: ಶುಕ್ರವಾರ ನಿಧನರಾದ ಖ್ಯಾತ ಬಾಲಿವುಡ್ ನಟ ಓಂ ಪುರಿ ಅವರ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದ್ದು, ಟ್ವಿಟರ್ ನಲ್ಲಿ ನಮ್ಮನ್ನಗಲಿದ ನಟನಿಗೆ ಸಂತಾಪ ಸೂಚಿಸಲಾಗಿದೆ.
ನಟ ಓಂಪುರಿ ಅವರ ನಿಧನದಿಂದಾಗಿ ಮನಸ್ಸು ಭಾರವಾಗಿದ್ದು, ಅವರ ನಟನೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಅಂತೆಯೇ ನಟ ಅನುಪಮ್ ಖೇರ್ ಅವರು ಕೂಡ ಟ್ವೀಟ್ ಮಾಡಿದ್ದು, ಬೆಡ್ ಮೇಲೆ ಚಲನೆ ಇಲ್ಲದೇ ಮಲಗಿರುವ ಅವರನ್ನು ನೋಡಿ ನಿಜಕ್ಕೂ ನನಗೆ ನಂಬಲಾಗುತ್ತಿಲ್ಲ. ಓಂಪುರಿ ಇನ್ನಿಲ್ಲ ಎಂದು ಹೇಳಲು ದುಃಖವಾಗತ್ತಿದೆ ಎಂದು ಹೇಳಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಟ್ವೀಟ್ ಮಾಡಿದ್ದು, ದಶಕದ ಅತ್ಯುತ್ತಮ ನಟ ಓಂಪುರಿ ಇನ್ನಿಲ್ಲ ಎಂದು ಹೇಳಿದ್ದಾರೆ.