ರಾವಲ್ಪಿಂಡಿ: ಪಾಕಿಸ್ತಾನದ ಮೇಲೆ ಮತ್ತೊಂದು ಸೀಮಿತ ದಾಳಿ ನಡೆಸುವ ಭಾರತದ ಹೇಳಿಕೆಯನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವಾ ಅವರು ಗುರುವಾರ ತಳ್ಳಿಹಾಕಿದ್ದಾರೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು, ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ ಸದಾ ಮುಂದಿರುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ ಎಂದಾದರೇ ಭುಜ ಸಡಿಲಿಸಿ ಹಾಗೂ ತೋಳ್ಬಲ ಪ್ರದರ್ಶನಕ್ಕೆ ಭಾರತ ಹಿಂಜರಿಯುವುದಿಲ್ಲ. ಭಾರತ ಯುದ್ಧಕ್ಕೆ ಸಿದ್ಧವಾಗುತ್ತಿದ್ದು, ಪಾಕಿಸ್ತಾನ ವಿರುದ್ಧ ಮತ್ತೊಂದು ಸೀಮಿತ ದಾಳಿ ನಡೆದರೂ ಅಚ್ಚರಿ ಇಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಾಜ್ವಾ ಅವರು, ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದೇ ಆದರೆ, ದಾಳಿಗೆ ದಿಟ್ಟ ಉತ್ತರ ನೀಡಲು ಪಾಕಿಸ್ತಾನ ಸದಾ ಸಿದ್ಧವಿರುತ್ತದೆ ಎಂದು ಹೇಳಿದ್ದಾರೆ.
ಜಾಬ್ವಾ ಹೇಳಿಕೆ ಕುರಿತಂತೆ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಘಫೂರ್ ಅವರು ಸರಣಿ ಟ್ವೀಟ್ ಮಾಡಿದ್ದು, ಪಾಕಿಸ್ತಾನದ ಮತ್ತೊಂದು ಸೀಮಿತ ದಾಳಿ ನಡೆಸಲು ಭಾರತ ಸಿದ್ಧವಿದೆ ಎಂಬ ಹೇಳಿಕೆಯನ್ನು ಬಾಜ್ವಾ ಅವರು ತಿರಸ್ಕರಿಸಿದ್ದಾರೆ. ಅಲ್ಲದೆ, ಪಾಕಿಸ್ತಾನದ ಮೇಲೆ ಯಾವುದೇ ದಾಳಿ ನಡೆದರೂ ದಿಟ್ಟ ಉತ್ತರ ನೀಡಲು ನಮ್ಮ ಸೇನೆ ಸಿದ್ಧವಿದೆ ಎಂದು ಹೇಳಿದ್ದಾರೆಂದು ಹೇಳಿಕೊಂಡಿದ್ದಾರೆ.