ನವದೆಹಲಿ: ಪಂಚರಾಜ್ಯಗಳ ಚುನಾವಣೆಗೂ ಮುನ್ನ ಬಜೆಟ್ ಮಂಡನೆ ಮಾಡುವುದನ್ನು ವಿರೋಧಿಸಿ ಪ್ರತಿಪಕ್ಷಗಳು ನೀಡಿದ್ದ ದೂರಿಗೆ ಸ್ಪಂದಿಸಿರುವ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.
ಚುನಾವಣೆ ನಡೆಯುವುದಕ್ಕೂ ಮುನ್ನ ಬಜೆಟ್ ಮಂಡನೆ ಮಾಡುವುದರ ಕುರಿತು ಚುನಾವಣಾ ಆಯೋಗದ ಮುಖ್ಯ ಆಯುಕ್ತ ನಜೀಂ ಜೈದಿ, ಕ್ಯಾಬಿನೆಟ್ ಕಾರ್ಯದರ್ಶಿ ಪಿಕೆ ಸಿನ್ಹಾ ಅವರಿಗೆ ಪತ್ರ ಬರೆದಿದ್ದು, ಪಿಕೆ ಸಿನ್ಹಾ ಅವರು ಸಂಸದೀಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಚುನವಣಾ ಆಯೋಗಕ್ಕೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ತಿಳಿಸುವ ಸಾಧ್ಯತೆಗಳಿವೆ.
ಇತ್ತೀಚಿನ ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಫೆ.1 ಕ್ಕೆ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸಿದೆ. ಈ ನಡುವೆಯೇ ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ ವಿಧಾನಸಭಾ ಚುನಾವಣೆ ನಡೆಯಲಿದ್ದು ಕಾಂಗ್ರೆಸ್, ಟಿಎಂಸಿ, ಬಿಎಸ್ ಪಿ, ಎಸ್ ಪಿ ಸೇರಿದಂತೆ ವಿರೋಧಪಕ್ಷಗಳು ಚುನಾವಣೆ ಆಸುಪಾಸಿನಲ್ಲೇ ಬಜೆಟ್ ಮಂಡನೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಾ.8 ರ ವರೆಗೆ ಬಜೆಟ್ ನ್ನು ಮುಂದೂಡುವಂತೆ ಮನವಿ ಮಾಡಿವೆ.