ನವದೆಹಲಿ: ನೋಟು ನಿಷೇಧದ ಬಳಿಕ ಬ್ಯಾಂಕುಗಳಿಗೆ ಜಮೆಯಾದ ಎಲ್ಲ ಹಣವೂ ಬಿಳಿ ಹಣವಲ್ಲ ಎಂದು ಹೇಳುವ ಮೂಲಕ ಜಮೆಯಾದ ಕಪ್ಪುಹಣದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಭಾನುವಾರ ಪ್ರತಿಕ್ರಿಯೆ ನೀಡಿದ ಸಚಿವ ಜೇಟ್ಲಿ, ಬ್ಯಾಂಕುಗಳಿಗೆ ಭಾರೀ ಪ್ರಮಾಣದ ಹಣ ಹರಿದು ಬಂದಿದೆ ಎಂದಾಕ್ಷಣ ಅದೆಲ್ಲವೂ ಸಕ್ರಮ ಹಣ ಎಂದು ಅರ್ಥವಲ್ಲ. ಕೇಂದ್ರ ಸರ್ಕಾರದ ನೋಟು ನಿಷೇಧದಿಂದಾಗಿ ಕಾಳಧನಿಕರು ತಮ್ಮಲ್ಲಿರುವ ಕಪ್ಪುಹಣವನ್ನು ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಬ್ಯಾಂಕಿನಲ್ಲಿ ಜಮೆಯಾದ ತಕ್ಷಣ ಕಪ್ಪು ಹಣದ ಬಣ್ಣ ಬದಲಾಗುವುದಿಲ್ಲ. ಬದಲಿಗೆ ಅದು ತನ್ನ ಅನಾಮಧೇಯತೆಯನ್ನು ಕಳೆದುಕೊಂಡು, ಅದು ಯಾರ ಹಣ ಎಂಬುದು ತಿಳಿಯುತ್ತದೆ. ಆಗ ಅವರ ಮೇಲೆ ತೆರಿಗೆ ಹೇರಬಹುದು ಎಂದು ಹೇಳಿದ್ದಾರೆ.
ಕಳೆದ ನವೆಂಬರ್ 8ರಂದು ಕೇಂದ್ರ ಸರ್ಕಾರ 500, 1000 ರು. ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿತ್ತು. ಹೀಗಾಗಿ ಸುಮಾರು 15.5 ಲಕ್ಷ ಕೋಟಿ ರು. ಹಣದ ಚಲಾವಣೆ ಸ್ಥಗಿತವಾದ ಹಿನ್ನಲೆಯಲ್ಲಿ ನಿಷೇಧಿತ 500 ಮತ್ತು 1000 ರು.ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಮರಳಿವೆ. ಒಂದು ಅಂದಾಜಿನ ಪ್ರಕಾರ ಈಗಾಗಲೇ ಶೇ.97ರಷ್ಟು ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದು, ಈ ಪೈಕಿ ಕಪ್ಪುಹಣದ ಕುರಿತಂತೆ ತನಿಖೆ ನಡೆಸಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.
ದೇಶದಲ್ಲಿ 127 ಕೋಟಿ ಜನಸಂಖ್ಯೆ ಇದ್ದು, ಈ ಪೈಕಿ ಕೇವಲ 3.7 ಕೋಟಿ ಜನರು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಆ ಪೈಕಿ 99 ಲಕ್ಷ ಮಂದಿ ತಾವು 2.5 ಲಕ್ಷ ರು.ಗಿಂತ ಕಡಿಮೆ ಆದಾಯ ಹೊಂದಿರುವುದಾಗಿ ತಿಳಿಸಿದ್ದಾರೆ.ರು.1.95 ಕೋಟಿ ಮಂದಿ 5 ಲಕ್ಷಕ್ಕಿಂತ ಕಡಿಮೆ ಆದಾಯ, 52 ಲಕ್ಷ ಮಂದಿ 5ರಿಂದ 10 ಲಕ್ಷ ಆದಾಯ ಹಾಗೂ 24 ಲಕ್ಷ ಮಂದಿ 10 ಲಕ್ಷ ರು. ಮೇಲ್ಪಟ್ಟು ಆದಾಯ ಘೋಷಿಸಿಕೊಂಡಿದ್ದಾರೆ. ದೇಶದಲ್ಲಿ ತೆರಿಗೆ ವಂಚನೆಯನ್ನು ಅನೈತಿಕ ಅಥವಾ ಅಪರಾಧ ಎಂದು ಪರಿಗಣಿಸಿಲ್ಲ. ಅದೊಂದು ಜೀವನ ಶೈಲಿ ಎಂಬಂತಾಗಿ ಹೋಗಿದೆ. ವಿಶಾಲ ಸಾರ್ವಜನಿಕ ಹಿತಾಸಕ್ತಿಯಲ್ಲಿ ರಾಜಿಯಾಗುತ್ತಿದ್ದರೂ ಈ ರೂಢಿ ಮುಂದುವರಿಯಲು ಹಲವು ಸರ್ಕಾರಗಳೇಅವಕಾಶ ಕೊಟ್ಟಿವೆ. ನೋಟು ನಿಷೇಧ ಹೊಸ ರೂಢಿ ಸೃಷ್ಟಿಸಲಿದೆ ಎಂದು ಪರೋಕ್ಷವಾಗಿ ವಿಪಕ್ಷಗಳನ್ನು ಜೇಟ್ಲಿ ತಿವಿದಿದ್ದಾರೆ.
ತೆರಿಗೆ ಚೋರರ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನವಿದೆ ಎಂದು ಹೇಳಲು ನೋವಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ. "ನೋಟು ನಿಷೇಧ-ಎರಡು ತಿಂಗಳ ಹಿನ್ನೋಟ" ಎಂಬ ವಿಚಾರದ ಕುರಿತು ಫೇಸ್'ಬುಕ್‌ನಲ್ಲಿ ಲೇಖನ ಬರೆದಿರುವ ಜೇಟ್ಲಿ ಅವರು, "ನೋವು ಹಾಗೂ ತೊಂದರೆಯ ಅವಧಿ ಮುಗಿಯುತ್ತಾ ಬಂದಿದೆ. ಹಣಕಾಸು ಚಟುವಟಿಕೆ ಪುನರ್ ಸ್ಥಾಪನೆಯಾಗಲಿದೆ. ಭಾರೀ ಪ್ರಮಾಣದ ಹಣ ಬ್ಯಾಂಕಿಗೆ ಹರಿದುಬಂದಿರುವ ಹಿನ್ನಲೆಯಲ್ಲಿ ಬ್ಯಾಂಕ್ ಸಾಲಗಳ ಬಡ್ಡಿ ದರ ಇಳಿಕೆಯಾಗಲಿದೆ. ಅಗತ್ಯ ಪ್ರಮಾಣದಲ್ಲಿ ನಗದು ದೊರೆಯುತ್ತಿರುವುದರಿಂದ ಬ್ಯಾಂಕ್'ಗಳ ಮುಂದಿನ ಸರತಿ ಸಾಲು ಕಾಣೆಯಾಗಿದೆ ಎಂದು ಹೇಳಿದ್ದಾರೆ.