ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರು ಗಂಭೀರ ಅಪರಾಧ ಎಸಗಿದ್ದು, ಇದರಿಂದ ದೇಶಕ್ಕೆ ಅವಮಾನವಾಗಿದೆ ಎಂದು ಸಿಬಿಐ ಸೋಮವಾರ ಹೈಕೋರ್ಟ್ ನಲ್ಲಿ ಆರೋಪಿಸಿದೆ.
ತ್ಯಾಗಿ ಜಾಮೀನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರುವ ಸಿಬಿಐ, ವಿಚಾರಣಾಧೀನ ಕೋರ್ಟ್ ಆರೋಪಿಗೆ ಜಾಮೀನು ನೀಡಿರುವುದು ಕಾನೂನು ಬಾಹಿರ ಎಂದು ವಾದಿಸಿದೆ.
ನ್ಯಾಯಮೂರ್ತಿ ಐ.ಎಸ್.ಮೆಹ್ತಾ ಅವರು ಇಂದು ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದರು. ಈ ವೇಳೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಒಂದು ಗಂಭೀರ ವಿಷಯವಾಗಿದ್ದು, ಎಸ್ ಪಿ ತ್ಯಾಗಿ ಸೇರಿದಂತೆ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು ತನಿಖೆ ಪ್ರಕ್ರಿಯೆ ವಿಳಂಬ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿಬಿಐ ದೂರಿದೆ. ಅಲ್ಲದೆ ಕೆಳ ನ್ಯಾಯಾಲಯ ಸಾಕ್ಷ್ಯಗಳಿಗೆ ವಿರುದ್ಧವಾಗಿ ಆರೋಪಿಗೆ ಜಾಮೀನು ನೀಡಿರುವುದು ಕಾನೂನು ಬಾಹಿರ. ಹೀಗಾಗಿ ಈ ಕೂಡಲೇ ತ್ಯಾಗಿಯ ಜಾಮೀನನ್ನು ರದ್ದುಗೊಳಿಸಬೇಕು ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮನವಿ ಮಾಡಿದರು.
ಸಿಬಿಐ ವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆರೋಪಿ ಪರ ವಕೀಲರು, ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ತ್ಯಾಗಿಯವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಮತ್ತು ಸಿಬಿಐ ಸಲ್ಲಿಸಿದ್ದ ಹೆಚ್ಚುವರಿ ಅಫಿಡವಿಟ್ ಗೂ ಅವರು ಪ್ರತಿಕ್ರಿಯೆ ಸಲ್ಲಿಸಿದ್ದಾರೆ ಎಂದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಮೆಹ್ತಾ ಅವರು ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದ್ದಾರೆ.