ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಪ್ರದೇಶದಲ್ಲಿರುವ ಜಿಆರ್ ಇಎಫ್ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ರು.1 ಲಕ್ಷ ಹಣವನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಹಣ ಬಿಡುಗಡೆ ಕುರಿತಂತೆ ಮಾಹಿತಿ ನೀಡಿರುವ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೀಷ್ ಮೆಹ್ತಾ ಅವರು, ಮಧ್ಯರಾತ್ರಿ 1.15ರ ಸುಮಾರಿಗೆ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ ನೆಲೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 10 ಜಿಆರ್ ಇಎಫ್ ಸಿಬ್ಬಂದಿಗಳು ಹಾಗೂ 8-10 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಉಗ್ರರ ದಾಳಿ ವೇಳೆ ಮೂವರು ಮೃತಪಟ್ಟಿದ್ದರು, ಮೃತರ ಕುಟುಂಬಕ್ಕೆ ತಲಾ ರೂ.1 ಲಕ್ಷ ಹಾಗೂ ಗಾಯಗೊಂಡವರಿಗೆ ರೂ.25 ಸಾವಿರ ಹಣವನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬಿಡುಗಡೆ ಮಾಡಿದ್ದಾರೆ. ದಾಳಿ ಬಳಿಕ ಉಗ್ರರು ಪರಾರಿಯಾಗಿದ್ದು, ಈಗಲೂ ಕಾರ್ಯಾಚಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಜಮ್ಮು ಜಿಲ್ಲೆಯ ಅಖ್ನೂರ್ ಪ್ರದೇಶದಲ್ಲಿರುವ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್ ಇಎಫ್) ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿ ವೇಳೆ ಜಿಆರ್ ಇಎಫ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.