ನವದೆಹಲಿ: ದೇಶದ ಗಡಿ ಕಾಯುವ ಯೋಧರಿಗೆ ಉನ್ನತ ಅಧಿಕಾರಿಗಳು ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುತ್ತಿದ್ದಾರೆಂಬ ಯೋಧನ ಆರೋಪವನ್ನು ಭಾರತೀಯ ಸೇನೆ ಮಂಗಳವಾರ ತಿರಸ್ಕರಿಸಿದೆ.
ನಿನ್ನೆಯಷ್ಟೇ ಬಿಎಸ್ಎಫ್ ಯೋಧನೊಬ್ಬ ಗಡಿಯಲ್ಲಿ ತಾವು ಎದುರಿಸುತ್ತಿರುವ ಸಂಕಷ್ಟ ಕುರಿತಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋ ಕುರಿತಂತೆ ಅಧಿಕಾರಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಆಲ್ಲದೆ, ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.
ಈ ಹಿನ್ನಲೆಯಲ್ಲಿ ಯೋಧನ ವಿಡಿಯೋ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ ಆರೋಪವನ್ನು ತಿರಸ್ಕರಿಸಿದೆ. ಆರೋಪ ಮಾಡುತ್ತಿರುವ ಯೋಧ ಸದಾಕಾಲ ಪಾನಮತ್ತನಾಗಿರುತ್ತಿದೆ. ಅಲ್ಲದೆ, ಅನುಮತಿಯಿಲ್ಲದೆಯೇ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದ. ಹಲವು ದಿನಗಳಿಂದಲೂ ಆತನಿಂದ ಸಮಸ್ಯೆಗಳು ಬರುತ್ತಿತ್ತು. ಹಿರಿಯ ಅಧಿಕಾರಿಗಳೊಂದಿಗೂ ದುರ್ನಡತೆ ತೋರುತ್ತಿದ್ದ. ದುರ್ವರ್ತನೆ ಸರಿಪಡಿಸಿಕೊಳ್ಳುವುದಕ್ಕಾಗಿ ಕೆಲ ದಿನಗಳ ಕಾಲ ಅಂತಹ ಯೋಧರಿಗೆ ಕಠಿಣ ಪರಿಸ್ಥಿತಿ ಇರುವಂತಹ ಪ್ರದೇಶಗಳ ಕಡೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಹೀಗಾಗಿ ಅಲ್ಲಿನ ಪರಿಸ್ಥಿತಿ ಕುರಿತಂತೆ ವಿಡಿಯೋ ಮಾಡಿ ಬಹಿರಂಗಪಡಿಸಿದ್ದಾನೆ. ಆತನಿಗೆ ಕೌನ್ಸಿಲಿಂಗ್ ಅಗತ್ಯವಿದೆ ಎಂದು ಹೇಳಿದೆ.
ಆರೋಪ ಕೇಳಿ ಬರುತ್ತಿದ್ದಂತೆ ಗಡಿ ಪ್ರದೇಶಕ್ಕೆ ಬಿಎಸ್ಎಫ್ ಪೊಲೀಸ್ ವರಿಷ್ಠಾಧಿಕಾರಿ ಡಿ.ಕೆ. ಉಪಾಧ್ಯಾಯ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಆರೋಪವೊಂದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು ಆರೋಪದ ಕುರಿತಂತೆ ಯಾವುದೇ ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಯಾವುದೇ ತಪ್ಪುಗಳು ಕಂಡುಬಂದಿದ್ದರೂ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಆಹಾರ ರುಚಿ ಅತ್ಯಂತ ಬಹಳ ಚೆನ್ನಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಈ ಹಿಂದೆ ಎಂದಿಗೂ ಯಾವುದೇ ದೂರುಗಳು ಬಂದಿರಲಿಲ್ಲ. ಆರೋಪ ವ್ಯಕ್ತಪಡಿಸಿರುವ ಯೋಧ ಪದೇಪದೇ ಶಿಸ್ತು ಉಲ್ಲಂಘನೆ ಮಾಡಿದ್ದರು. ಪ್ರಕರಣ ಸಂಬಂಧ ನ್ಯಾಯಯುತವಾಗಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಆರೋಪ ಮಾಡಿದ್ದ ಯೋಧ ತೇಜ ಬಹದ್ದೂರ್ ಅವರು ಖಾಸಗಿ ಮಾಧ್ಯಮವೊಂದರ ಜೊತೆಗೆ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ ಬಳಿಕ ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಮೇಲಧಿಕಾರಿಗಳು ನನ್ನನ್ನು ತುಳಿಯಲು ಯತ್ನಿಸುತ್ತಿದ್ದಾರೆ. ವಿಡಿಯೋ ಹಾಕಿದ ಬಳಿಕ ಅಧಿಕಾರಿಗಳು ನನ್ನ ವಿರುದ್ದ ಕ್ರಮಕೈಗೊಳ್ಳುತ್ತಾರೆಂದು ನನಗೆ ಗೊತ್ತಿತ್ತು. ಕೆಲಸ ಕಳೆದುಕೊಳ್ಳುವ ಬಗ್ಗೆ ನನಗೆ ಭಯವಿಲ್ಲ. ಗಡಿಯಲ್ಲಿರುವ ವಾಸ್ತವತೆಯನ್ನು ನಾನು ಬಹಿರಂಗಪಡಿಸಿದ್ದೇನೆ. ನನ್ನಿಂದ ಇತರೆ ಯೋಧರಿಗೆ ಲಾಭವಾಗುತ್ತದೆ ಎಂಬುದೇ ಆದರೆ, ಹೋರಾಡಲು ನಾನು ಸಿದ್ಧನಿದ್ದೇನೆಂದು ಹೇಳಿಕೊಂಡಿದ್ದಾರೆ.