ದೇಶ

ಯೋಧರಿಗೆ ಕಳಪೆ ಆಹಾರ ಪ್ರಕರಣ: ವರದಿ ಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ಪ್ರಧಾನಿ ಕಾರ್ಯಾಲಯ ಸೂಚನೆ

Manjula VN

ನವದೆಹಲಿ: ದೇಶದ ಗಡಿ ಕಾಯುವ ಯೋಧಿರಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದಾರೆಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರಗತಿಯಲ್ಲಿ ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಧಾನಮಂತ್ರಿ ಕಾರ್ಯಾಲಯ ಗುರುವಾರ ಸೂಚನೆ ನೀಡಿದೆ.

ಗಡಿ ಕಾಯುವ ಯೋಧರಿಗೆ ಅಧಿಕಾರಿಗಳು ನೀಡುತ್ತಿರುವ ಕಳಪೆ ಗುಣಮಟ್ಟದ ಆಹಾರ ಕುರಿತಂತೆ ಬಿಎಸ್ ಎಫ್ ಯೋಧರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿ, ತಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು, ಅಧಿಕಾರಿಗಳ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿತ್ತು.

ಪ್ರಕರಣ ಸಂಬಂಧ ಯೋಧನ ಪತ್ನಿ ಪತಿ ತೇಜ್ ಬಹದ್ದೂರ್ ಯಾದವ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೆ, ಅಧಿಕಾರಿಗಳು ದೂರು ಹಿಂಪಡೆಯುವಂತೆ ಹಾಗೂ ಕ್ಷಮೆಯಾಚಿಸುವಂತೆ ಪತಿ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಆರೋಪ ವ್ಯಕ್ತಪಡಿಸಿದ್ದರು.
 
ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಾಲಯ ಮಧ್ಯಪ್ರವೇಶಿಸಿದ್ದು, ಪ್ರಕರಣ ಸಂಬಂಧ ಕೂಡಲೇ ವರದಿಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಯೋಧನ ಪತ್ನಿ ಶರ್ಮಿಳಾ ಅವರು, ಪ್ರಕರಣ ಸಂಬಂಧ ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಮೋದಿಯವರ ಮಧ್ಯುಪ್ರವೇಶ ಮಾಡಬೇಕೆಂಬುದು ನನ್ನ ಪತಿಗೆ ಬೇಕಿತ್ತು. ಇದೀಗ ಅವರು ಯಶಸ್ವಿಯಾಗಿದ್ದಾರೆ. ಗಡಿ ಕಾಯುವ ಇನ್ನಿತರೆ ಯೋಧರಿಗೆ ಉತ್ತಮ ಸೌಲಭ್ಯಗಳು ಸಿಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

SCROLL FOR NEXT