ಮುಂಬೈ: ಕಳೆದ ವರ್ಷ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿ ಅಲ್ಲಿ ಸಿಕ್ಕಿಹಾಕಿಕೊಂಡಿರು ಭಾರತೀಯ ಯೋಧ ಚಂದು ಚವ್ಹಾಣ್ ಅವರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸೇನೆ ಬದ್ಧವಾಗಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಅವರು ಗುರುವಾರ ತಿಳಿಸಿದ್ದಾರೆ.
ಇಂದು ಮುಂಬೈನಲ್ಲಿ ಭಾರತೀಯ ನೌಕಾಪಡೆಯ ಖಂಡೇರಿ ಜಲಾಂತರ್ಗಾಮಿ ನೌಕೆಯನ್ನು ದೇಶಕ್ಕೆ ಸಮರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಭಾಮ್ರೆ, ಚಂದು ಚವ್ಹಾಣ್ ಅವರನ್ನು ಶೀಘ್ರದಲ್ಲೇ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ಪಾಕಿಸ್ತಾನ ಗಡಿಯೊಳಕ್ಕೆ ನುಸುಳಿ ಅಲ್ಲಿ ಸೆರೆ ಸಿಕ್ಕಿರುವ ಯೋಧ ಚಂದು ಚವ್ಹಾಣ್ ಬಗ್ಗೆ ಮಾಹಿತಿ ಕಲೆಹಾಕಲು ಭಾರತದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಈವರೆಗೆ ಸುಮಾರು 15ರಿಂದ 20 ಬಾರಿ ಪಾಕಿಸ್ತಾನದ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಮಾತಾಡಿದ್ದಾರೆ. ಆ ಪ್ರಯತ್ನಗಳಿಂದಾಗಿ ಚಂದು ಬದುಕಿರುವುದು ದೃಢಪಟ್ಟಿತ್ತು. ಇದೀಗ, ಭಾರತದ ಸತತ ಪ್ರಯತ್ನಗಳಿಂದ ಪಾಕಿಸ್ತಾನ ಶೀಘ್ರವೇ ಆತನನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ ಎಂದರು.
ಮಹಾರಾಷ್ಟ್ರದ ಭಮ್ರೆ ಜಿಲ್ಲೆಯ ಧುಲೆ ಎಂಬ ಊರಿನ ಚಂದು ಚವ್ಹಾಣ್, 2016ರ ಸೆಪ್ಟಂಬರ್ 30ರಂದು ತಮಗರಿವಿಲ್ಲದಂತೆಯೇ ಪಾಕಿಸ್ತಾನದ ಗಡಿ ದಾಟಿ ಹೋಗಿದ್ದರು.