ಚೆನ್ನೈ: ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆಗೆ ಪದೇ ಪದೇ ಸುಪ್ರೀಂಕೋರ್ಟ ನಕಾರ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಗುರುವಾರ ನಿರ್ಧರಿಸಿದೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನ ಪ್ರಮುಖ ಆಚರಣೆಯಾಗಿರುವ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕೆಂದು ಹೇಳಿ ಈ ಹಿಂದೆ ತಮಿಳುನಾಡು ಸರ್ಕಾರ ಮನವಿ ಮಾಡಿಕೊಂಡಿತ್ತು. ಈ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿರುವ ಸುಪ್ರೀಂ ಅರ್ಜಿಯನ್ನು ತಳ್ಳಿಹಾಕಿದೆ. ಜಲ್ಲಿಕಟ್ಟು ಕ್ರೀಡೆ ನಡೆಸುವಂತೆ ಆದೇಶ ಹೊರಡಿಸಿ ಎಂದು ನ್ಯಾಯಾಲಯಕ್ಕೆ ಹೇಳುವುದು ನ್ಯಾಯಯುತವಲ್ಲ. ಪ್ರಕರಣ ಕುರಿತು ಈಗಾಗಲೇ ಕರಡನ್ನು ರಚಿಸಲಾಗಿದ್ದು, ಶನಿವಾರದೊಳಗಾಗಿ ತೀರ್ಪುನೀಡಲು ಸಾಧ್ಯವಿಲ್ಲ.
ಸುಪ್ರೀಂ ಕೋರ್ಟ್ ಜಲ್ಲಿಕಟ್ಟನ್ನು ನಿಷೇಧಿಸಿರುವುದರಿಂದ ಕಳೆದ ಎರಡು ವರ್ಷಗಳಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆ ಆಚರಣೆ ತಾತ್ಕಾಲಿಕವಾಗಿ ನಿಂತಿದೆ. ಪ್ರಾಣಿಗಳಿಗೆ ತೀವ್ರ ಹಿಂಸೆಯಾಗುತ್ತದೆ ಎಂದು ಪ್ರಾಣಿದಯಾ ಸಂಘಗಳು ವಿರೋಧಿಸಿ ಅರ್ಜಿ ಹಾಕಿದ್ದವು.