ನವದೆಹಲಿ: ಭಾರತೀಯ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವ್ ಅವರು ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸುವ ಮೂಲಕ ಅಚ್ಚರಿ ಮೂಡಿಸಿದರು.
ರಾಜಸ್ಥಾನದ ಉತ್ತರ್ ಲೈ ವಾಯುಪಡೆಗೆ ಗುರುವಾರ ಭೇಟಿ ನೀಡಿದ್ದ ವಾಯುಪಡೆ ಮುಖ್ಯಸ್ಥ ಬಿ.ಎಸ್.ಧನೋವ್ ಅವರು, ಏಕಾಂಗಿಯಾಗಿ ಭಾರತೀಯ ವಾಯುಪಡೆಯ ಅತ್ಯಂತ ಹಳೆಯ ಯುದ್ಧ ವಿಮಾನ "ಮಿಗ್-21' ಯುದ್ಧ ವಿಮಾನವನ್ನು ಚಾಲನೆ ಮಾಡಿದ್ದಾರೆ. ಭಾರತೀಯ ವಾಯುಪಡೆ ಇತಿಹಾಸದಲ್ಲಿ ಇದು ಅಪರೂಪದ ಘಟನೆಯಾಗಿದ್ದು, ಸೇನಾ ಮುಖ್ಯಸ್ಥರೊಬ್ಬರು ಏಕಾಂಗಿಯಾಗಿ ಯುದ್ಧ ವಿಮಾನವನ್ನು ಹಾರಾಟ ನಡೆಸಿರುವುದು ಇದೇ ಮೊದಲು.
ಬಿಎಸ್ ಧನೋವ್ ಅವರು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ರೀತಿ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ್ದಾರೆ. ಆ ಮೂಲಕ ಮಿಗ್-21 ಯುದ್ಧ ವಿಮಾನ ಸುರಕ್ಷಿತವಾಗಿದೆ ಎಂದು ಬಿಎಸ್ ಧನೋವ್ ಪರೋಕ್ಷವಾಗಿ ಸಂದೇಶ ಸಾರಿದ್ದಾರೆ. ಈ ಹಿಂದೆ ನಡೆದಿದ್ದ ಹಲವು ಮಿಗ್ 21 ಯುದ್ಧ ವಿಮಾನಗಳ ಅಪಘಾತದಿಂದಾಗಿ ವಿಮಾನದ ಸುರಕ್ಷತೆಯ ಕುರಿತು ಸಾಕಷ್ಟು ಶಂಕೆ ಎದ್ದಿದ್ದವು. ಇದೀಗ ಸ್ವತಃ ಏಕಾಂಗಿ ಯುದ್ಧ ವಿಮಾನದಲ್ಲಿ ಹಾರಾಟ ಮಾಡುವ ಮೂಲಕ ಧನೋವ್ ಅವರು ಶಂಕೆಯನ್ನು ಶಮನಗೊಳಿಸುವ ಯತ್ನ ಮಾಡಿದ್ದಾರೆ.
ಈ ಹಿಂದೆ ಇದೇ ಧನೋವ್ ಅವರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಇದೇ ಮಾದರಿಯ ಯುದ್ಧವಿಮಾನಗಳ ಹಾರಾಟವನ್ನು ನಡೆಸಿದ್ದರು. ಅನೇಕ ಸಲ ರಾತ್ರಿ ವೇಳೆ ನಡೆಯುತ್ತಿದ್ದ ಕಾರ್ಯಾಚರಣೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವರ ಸಾಧನೆ ಮೆಚ್ಚಿ ಯೋಧ ಸೇವಾ ಪದಕವನ್ನು ಸಹ ನೀಡಲಾಗಿತ್ತು.