ನವದೆಹಲಿ: ಸಮಾಜವಾದಿ ಪಕ್ಷದ ‘ಸೈಕಲ್’ ಲಾಂಛನ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಪುತ್ರ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣಗಳ ಅಹವಾಲು ಆಲಿಸಿದ ಬಳಿಕ ಚುನಾವಣಾ ಆಯೋಗ ಶುಕ್ರವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಉಭಯ ಬಣಗಳು ಇಂದು ಸೈಕಲ್ ಚಿಹ್ನೆ ತಮಗೇ ಸೇರಬೇಕು ಎಂದು ಚುನಾವಣಾ ಆಯೋಗದ ಮುಂದೆ ವಾದಿಸಿದವು.
ವಾದ ಆಲಿಸುವ ಸಲುವಾಗಿ ಚುನಾವಣಾ ಆಯೋಗವು ತಂದೆ-ಮಗನ ಬಣಗಳನ್ನು ಕರೆಸಿಕೊಂಡಿತ್ತು. ಚುನಾವಣಾ ಆಯೋಗದ ಮುಂದೆ ಅಖಿಲೇಶ್ ಯಾದವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಬಹುತೇಕ ಸಂಸತ್ ಸದಸ್ಯರು, ಶಾಸಕರು ಮತ್ತು ಎಸ್ಪಿ ಪ್ರತಿನಿಧಿಗಳು ಅಖಿಲೇಶ್ ಯಾದವ್ ಜೊತೆಗಿದ್ದು, ಅವರಿಗೆ ಸೈಕಲ್ ಚಿಹ್ನೆ ನೀಡಬೇಕು ಎಂದು ವಾದಿಸಿದರು.
ಪ್ರತಿವಾದ ಮಂಡಿಸಿದ ಮುಲಾಯಂ ಸಿಂಗ್ ಬಣ, ಅಖಿಲೇಶ್ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಸಮಾವೇಶವೇ ಎಸ್ಪಿ ಸಂವಿಧಾನಕ್ಕೆ ವಿರುದ್ಧ ಎಂದು ವಿವರಿಸಿದರು.