ದೇಶ

ನೋಟು ಅಮಾನ್ಯ ವಿಚಾರದಲ್ಲಿ ಪ್ರಧಾನಿಯ ವಿಚಾರಣೆ ಇಲ್ಲ: ಪಿಎಸಿ ಸ್ಪಷ್ಟನೆ

Srinivas Rao BV
ನವದೆಹಲಿ: 500, 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವ ಪ್ರಕರಣದ ಬಗ್ಗೆ ಅಗತ್ಯವಿದ್ದರೆ ಪ್ರಧಾನಿಯ ವಿಚಾರಣೆಯನ್ನೂ ನಡೆಸಲಾಗುವುದು ಎಂದಿದ್ದ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆವಿ ಥಾಮಸ್ ಈಗ ಉಲ್ಟಾ ಹೊಡೆದಿದ್ದು, ಪ್ರಧಾನಿಯ ವಿಚಾರಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಪ್ರಧಾನಿಯವರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಚಾರಣೆಗೊಳಪಡಿಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕೆವಿ ಥಾಮಸ್ ಹೇಳಿದ್ದಾರೆ. ಜ.13 ರಂದು ನಡೆದ ಪಿಎಸಿ ಸಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಸದಸ್ಯರು ಪ್ರಧಾನಿಯ ವಿಚಾರಣೆ ನಡೆಸುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ, ಥಾಮಸ್ ಅವರು ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳದೇ ಇದ್ದಲ್ಲಿ ಪಿಎಸಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. 
ಬಿಜೆಪಿ ಸದಸ್ಯರ ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡಲು ಥಾಮಸ್ ಪ್ರಾರಂಭದಲ್ಲಿ ನಿರಾಕರಿಸಿದರಾದರೂ, ನಂತರ ಸದಸ್ಯರ ಪಟ್ಟಿಗೆ ಮಣಿದು, ಪ್ರಧಾನಿಯನ್ನು ಕರೆಸಿ ವಿಚಾರಣೆ ನಡೆಸಲು ನಿಯಮಗಳಲ್ಲಿ ಅವಕಾಶವಿಲ್ಲ, ಈ ಹಿಂದೆ ನೀಡಿದ್ದ ಹೇಳಿಕೆ ಕೇವಲ ಅನೌಪಚಾರಿಕವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. 
ಥಾಮಸ್ ಅವರ ಈ ಹಿಂದಿನ ಹೇಳಿಕೆಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ, 1966 ರ ಪ್ರಕರಣವೊಂದನ್ನು ಉದಾಹರಣೆ ನೀಡಿದ್ದು, ಅಂದಿನ ಕೃಷಿ ಸಚಿವರಾಗಿದ್ದ ಸಿ ಸುಬ್ರಹ್ಮಣ್ಯಂ ಅವರನ್ನು ಪಿಎಸಿ ವಿಚಾರಣೆ ನಡೆಸಲು ಯತ್ನಿಸಿತ್ತು. ಆದರೆ ಅವರು ಸಮಿತಿಯ ಎದುರು ಹಾಜರಾಗಿರಲಿಲ್ಲ. ಅಷ್ಟೇ ಅಲ್ಲದೇ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಇಂಥಹದ್ದೇ ಪರಿಸ್ಥಿತಿ ಎದುರಿಸಿದ್ದರು. ಆದರೆ ಪಿಎಸಿ ಅಧ್ಯಕ್ಷರಾಗಿದ್ದ ಮುರಳಿಮನೋಹರ್ ಜೋಷಿ ಅವರು ಪಿಎಸಿ ವಿಚಾರಣೆಗೆ ಹಾಜರಾಗುವಂತೆ ಮನಮೋಹನ್ ಸಿಂಗ್ ಅವರನ್ನು ಕೇಳಿರಲಿಲ್ಲ. ಅಂದಿನ ವಿಪಕ್ಷ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಸಹ ಪ್ರಧಾನಿಯ ಹಾಜರಾತಿಯನ್ನು ಬೆಂಬಲಿಸಿರಲಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT