ಕೋಲ್ಕತಾ: ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿ ಭಾನುವಾರ ಸಂಜೆ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 6 ಮಂದಿ ಭಕ್ತರು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಧಾನಿ ಕೋಲ್ಕತಾದಿಂದ ಸುಮಾರು 129 ಕಿ.ಮೀ ದೂರದಲ್ಲಿರುವ ಕಪಿಲ ಮುನಿ ಆಶ್ರಮದ ಆವರಣದಲ್ಲಿನ ಗಂಗಾನದಿ ದಡದಲ್ಲಿ ಈ ಘಟನೆ ಸಂಭವಿಸಿದೆ. ಮಕರ ಸಂಕ್ರಾಂತಿ ನಿಮಿತ್ತ ಇಂದು ಲಕ್ಷಾಂತರ ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿದ್ದು, 6ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ನೂರಾರು ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಾಲ್ತುಳಿತದಲ್ಲಿ ಗಾಯಗೊಂಡಿರುವ ಭಕ್ತರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಕರ ಸಂಕ್ರಾಂತಿ ನಿಮಿತ್ತ ಪ್ರತೀ ವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸಿ ಪವಿತ್ರ ಸ್ನಾನ ಮಾಡುತ್ತಾರೆ. ಹೀಗಾಗಿ ಈ ವರ್ಷವೂ ಇಲ್ಲಿನ ಸ್ಥಳೀಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಪವಿತ್ರ ಸ್ನಾನ ನಡೆಯುವ ಸ್ಥಳದಲ್ಲಿ ಭದ್ರತೆಗಾಗಿ ಸುಮಾರು 9 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ 165ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇದಲ್ಲದೆ ಒಂದು ಡ್ರೋಣ್ ಕ್ಯಾಮೆರಾ ಹಾಗೂ ಒಂದು ನೌಕಾಪಡೆಯ ನೌಕೆ ಸೇರಿದಂತೆ 20 ಯಾಂತ್ರಿಕ ಬೋಟ್ ಗಳನ್ನು ರಕ್ಷಣೆಗೆ ನಿಯೋಜಿಸಲಾಗಿತ್ತು. ಹೀಗಿದ್ದೂ ಕಾಲ್ತುಳಿತ ಸಂಭವಿಸಿದೆ.