ಜೆಹನಬಾದ್: ಬಿಹಾರದ ಸರ್ಕಾರಿ ಶಾಲೆಯ ಪ್ರಾಚಾರ್ಯ ಹಾಗೂ ಮೂವರು ಶಿಕ್ಷಕರು 12 ವರ್ಷದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಾಕೊ ದ್ವಿತಿಯದರ್ಜೆ ಶಾಲೆಯ ಪ್ರಾಚಾರ್ಯ ಅಜು ಅಹ್ಮದ್ ಹಾಗೂ ಶಿಕ್ಷಕರಾದ ಅತುಲ್ ರೆಹಮಾನ್, ಅಬ್ದುಲ್ ಬರಿ ಮತ್ತು ಎಂಡಿ ಶಕೌತ್ ಶಾಲೆಯಲ್ಲಿ ಒಂಟಿಯಾಗಿದ್ದ 12 ವರ್ಷದ ಬಾಲಕಿ ಮೇಲೆ ನಿನ್ನೆ ಅತ್ಯಾಚಾರ ಎಸಗಿದ್ದಾರೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪಿ.ಕೆ.ಶ್ರಿವಾತ್ಸವ್ ಅವರು ಹೇಳಿದ್ದಾರೆ.
ಬಾಲಿಕಯನ್ನು ಶಾಲಾ ಕಟ್ಟಡದ ಮಾಳಿಗೆ ಮೇಲೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಳಿಗೆ ಮೇಲೆ ಅಸ್ವಸ್ಥವಾಗಿ ಬಿದ್ದಿದ್ದ ಬಾಲಕಿಯನ್ನು ಆಕೆಯ ತಾಯಿ ಹಾಗೂ ಅದೇ ಶಾಲೆಯ ಮತ್ತೊಬ್ಬ ಶಿಕ್ಷಕರು ಪತ್ತೆಹಚ್ಚಿದ್ದು, ನಂತರ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ ಎಂದು ಶ್ರೀವಾತ್ಸವ್ ಅವರು ಹೇಳಿದ್ದಾರೆ.
ನಿನ್ನೆ ಭಾನುವಾರವಾಗಿದ್ದರೂ ಇಂದು ಶಾಲೆ ಇದ್ದು, ಶುಕ್ರವಾರ ರಜೆ ನೀಡಲಾಗಿದೆ ಎಂದು ಶಾಲಾ ಪ್ರಾಚಾರ್ಯ ಅಜು ಅಹ್ಮದ್ ಬಾಲಕಿಗೆ ಸುಳ್ಳು ಹೇಳಿ ಕರೆಸಿಕೊಂಡಿದ್ದ ಎಂದು ಶ್ರೀವಾತ್ಸವ್ ತಿಳಿಸಿದ್ದಾರೆ. ಅಲ್ಲದೆ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.