ದೇಶ

ಗಂಗಾಸಾಗರದಲ್ಲಿ ಕಾಲ್ತುಳಿತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Manjula VN

ಕೋಲ್ಕತಾ: ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿ ಉಂಟಾದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಪರಿಹಾರ ಘೋಷಣೆ ಮಾಡಿದ್ದಾರೆ.

ಗಂಗಾಸಾಗರದಲ್ಲಿ ನಿನ್ನೆ ಸಂಜೆ ಕಾಲ್ತುಳಿತ ಸಂಭವಿಸಿ, ಕನಿಷ್ಟ 6 ಮಂದಿ ಭಕ್ತರು ಸಾವನ್ನಪ್ಪಿದ್ದರು, ಅಲ್ಲದೆ, 15 ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದರು.

ಪ್ರಕರಣ ಸಂಬಂಧ ತೀವ್ರ ಆಘಾತ ಹಾಗೂ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಮೋದಿಯವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ರು. 2 ಲಕ್ಷ ಹಾಗೂ ಗಾಯಾಳುಗಳಿಗೆ ರು.50,000 ಹಣವನ್ನು ಪರಿಹಾರವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಕಾಲ್ತುಳಿತ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿಯವರು, ಪಶ್ಚಿಮ ಬಂಗಾಳದಲ್ಲಿ ಸಂಭವಿಸಿರುವ ಕಾಲ್ತುಳಿತದಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಸಾಕಷ್ಟು ನೋವುಂಟು ಮಾಡಿದೆ. ಸಾವನ್ನಪ್ಪಿದ್ದವರ ಕುಟುಂಬದ ಕುರಿತು ನೋವಾಗುತ್ತಿದೆ. ಗಾಯಾಳುಗಳು ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

ಅಲ್ಲದೆ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ರು.2 ಲಕ್ಷ ಹಾಗೂ ಗಾಯಾಳುಗಳಿಗೆ ರು.50,000 ಪರಿಹಾರ ಧನವನ್ನು ನೀಡಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜಧಾನಿ ಕೋಲ್ಕತಾದಿಂದ ಸುಮಾರು 129 ಕಿ.ಮೀ ದೂರದಲ್ಲಿರುವ ಕಪಿಲ ಮುನಿ ಆಶ್ರಮದ ಆವರಣದಲ್ಲಿನ ಗಂಗಾನದಿ ದಡದಲ್ಲಿ  ನಿನ್ನೆ ಕಾಲ್ತುಳಿತ ಸಂಭವಿಸಿತ್ತು. ಮಕರ ಸಂಕ್ರಾಂತಿ ನಿಮಿತ್ತ ನಿನ್ನೆ ಲಕ್ಷಾಂತರ ಭಕ್ತರು ನದಿಯಲ್ಲಿ  ಪವಿತ್ರ ಸ್ನಾನ ಮಾಡುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, ಹಲವು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದರು.

SCROLL FOR NEXT