ಮುಂಬೈ: ತನ್ನ ಮಗಳು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಐಎನ್‌ಎಕ್ಸ್ ಮಾಧ್ಯಮ ಸಮೂಹದ ಸಹಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಈಗ ತಮ್ಮ ಪತಿ, ಮಾಜಿ ಮಾಧ್ಯಮ ದೊರೆ ಪೀಟರ್ ಮುಖರ್ಜಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ.
ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಇಬ್ಬರ ವಿರುದ್ಧವೂ ಇಂದು ಕೋರ್ಟ್ ನಲ್ಲಿ ಶೀನಾ ಬೋರಾ ಕೊಲೆ ಆರೋಪ ಹೊರಿಸಲಾಗಿದ್ದು, ಈ ವೇಳೆ ನಾನು ನನ್ನ ಪತಿ ಪೀಟರ್ ಮುಖರ್ಜಿಗೆ ವಿವಾಹ ವಿಚ್ಛೇದನ ನೀಡಲು ಬಯಸುತ್ತೇನೆ. ಅದಕ್ಕಾಗಿ ವಿಚ್ಛೇದನ ಮನವಿ ನೀಡಲು ನನಗೆ ಅವಕಾಶ ಕೊಡಿ ಎಂದು ಇಂದ್ರಾಣಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಇಂದ್ರಾಣಿ 2002ರಲ್ಲಿ ಪೀಟರ್ ಮುಖರ್ಜಿ ಅವರನ್ನು ಮದುವೆಯಾಗಿದ್ದು, ಇದು ಇಬ್ಬರಿಗೂ ಎರಡನೇ ಮದುವೆ. 2012 ಏಪ್ರಿಲ್ 24ರಂದು ಶೀನಾ ಕೊಲೆ ನಡೆದಿತ್ತು. ಕೊಲೆಯಾದ ಮೂರು ವರ್ಷಗಳ ನಂತರ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಲಾಗಿತ್ತು.
ಶೀನಾ ಕೊಲೆ ಪ್ರಕರಣ ಸಂಬಂಧ ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ವಿರುದ್ಧ ವಿರುದ್ಧ ಐಪಿಸಿ ಸೆಕ್ಷನ್ 120(ಬಿ) (ಕ್ರಿಮಿನಲ್ ಸಂಚು). ಸೆಕ್ಷನ್ 34 (ಸಮಾನ ಉದ್ದೇಶದೊಂದಿಗೆ ಹಲವು ವ್ಯಕ್ತಿಗಳಿಂದ ಕೃತ್ಯ) ಸೆಕ್ಷನ್203 (ಅಪರಾಧಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡುವುದು), ಸೆಕ್ಷನ್364 (ಅಪಹರಣ), ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಪ್ರಕಾರ ದೋಷಾರೋಪ ಹೊರಿಸಲಾಗಿದೆ.