ದೇಶ

ಶೀನಾ ಬೋರಾ ಪ್ರಕರಣ: ಇಂದ್ರಾಣಿ, ಪೀಟರ್ ಮುಖರ್ಜಿ ವಿರುದ್ದ ಕೊಲೆ ಪ್ರಕರಣ ದಾಖಲು

Manjula VN

ನವದೆಹಲಿ: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಸಮೂಹ ಸಹಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮೊದಲ ಪತಿ ಸಂಜೀವ್ ಖನ್ನಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ ಹಾಗೂ ಸಂಜೀವ್ ಖನ್ನಾ ಮೂವರು ಆರೋಪಿಗಳ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120 (ಬಿ) (ಅಪರಾಧ ಸಂಚು), 365 (ಅಪಹರಣ), 302 (ಕೊಲೆ), 34 ( ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ), 203 ( ತಪ್ಪು ಮಾಹಿತಿ ನೀಡುವಿಕೆ), 201 (ಸಾಕ್ಷ್ಯಾಧಾರ ನಾಶ ) ಪ್ರಕರಣಗಳು ದಾಖಲಾಗಿವೆ.

ಪ್ರತ್ಯೇಕವಾಗಿ ಇಂದ್ರಾಣಿ ಹಾಗೂ ಮೊದಲ ಪತಿ ಸಂಜೀವ್ ಖನ್ನಾ ವಿರುದ್ದವೂ ಪ್ರಕರಣ ದಾಖಲಾಗಿದ್ದು, ಇಬ್ಬರ ವಿರುದ್ಧ 307 ( ಕೊಲೆ ಪ್ರಯತ್ನ), 120 ( ಬಿ) (ಅಪರಾಧ ಸಂಚು), ಪ್ರಕರಣಗಳು ದಾಖಲಾಗಿದೆ.

ಇದೇ ವೇಳೆ ಮೂವರ ವಿರುದ್ದ ಇದ್ದ ನಕಲು, ಮೋಸ ಮತ್ತು ಸಾಕ್ಷ್ಯಾಧಾರಿಗಳಿಗೆ ವಿಷ ಹಾಕಿದ್ದಾರೆಂಬ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿದ್ದು, ಪ್ರಕರಣ ಸಂಬಂಧ ಮುಂದಿನ ವಿಚಾರಣೆಯನ್ನು ಫೆಬ್ರವರಿ 1 ರಂದು ನಡೆಸುವುದಾಗಿ ತಿಳಿಸಿದೆ.

ಶೀನಾ ಹತ್ಯೆಯಾದ ಬಳಿಕ ಇಂದ್ರಾಣಿ ಪುತ್ರ ಶೀನಾ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದ. ಈ ಕಾರಣಕ್ಕೆ ಇಂದ್ರಾಣಿ ತನ್ನ ಪುತ್ರನಿಗೆ ವಿಷ ಪ್ರಾಶನ ಮಾಡಿ ಹತ್ಯೆ ಮಾಡಲು ಯತ್ನ ನಡೆಸಿದ್ದರೆಂದು ಹೇಳಲಾಗುತ್ತಿತ್ತು.

ಕೆಲ ದಿನಗಳ ಹಿಂದಷ್ಟೇ ಪೀಟರ್ ಮುಖರ್ಜಿ ಪರವಾಗಿ ವಾದ ಮಂಡಿಸಿದ್ದ ಪರ ವಕೀಲ ಮಿಹಿರ್ ಘೀವಾಲ ಅವರು, ಸಿಬಿಐ ಅಧಿಕಾರಿಗಳು ಇಮೇಲ್ ಹಾಗೂ ಸಂದೇಶಗಳನ್ನು ಹಿಡಿದುಕೊಂಡು ಪ್ರಕರಣಕ್ಕೆ ಬಣ್ಣ ಹಚ್ಚುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಂದೇಶಗಳನ್ನು ಇಟ್ಟುಕೊಂಡು ಪೀಟರ್ ಅವರು ಭಾಗಿಯಾಗಿದ್ದಾರೆಂದು ಹೇಳುತ್ತಿದ್ದಾರೆ. ಪೀಟರ್  ಅವರು ಕೊಲೆ ಹಾಗೂ ಮೋಸ, ನಕಲಿಯಲ್ಲಿ ಭಾಗಿಯಾಗಿದ್ದಾರೆಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ. ಸಾಕ್ಷ್ಯಾಧಾರಗಳು ದೊರಕದೆಯೇ ಪೀಟರ್ ಅವರ ವಿರುದ್ದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

2012ರಲ್ಲಿ ಶೀನಾ ಬೋರಾ ಅವರನ್ನು ಕಾರೊಂದರಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು. ನಂತರ ಮೃತದೇಹವನ್ನು ಅರಣ್ಯ ಪ್ರದೇಶವೊಂದರಲ್ಲಿ ಸುಟ್ಟು ಹಾಕಲಾಗಿತ್ತು.

SCROLL FOR NEXT