ನವದೆಹಲಿ: ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಸೇವೆಯಿಂದ ಕಡ್ಡಾಯ ನಿವೃತ್ತಿ ನೀಡಿದೆ. ರಾಜ್ ಕುಮಾರ್ ದೇವಂಗನ್(1992ರ ಬ್ಯಾಚ್, ಛತ್ತೀಸ್ ಗಢ ವಿಭಾಗ) ಮತ್ತು ಮಾಯಾಂಕ್ ಶೀಲ್ ಚೋಹನ್(1998 ಬ್ಯಾಚ್, ಎಜಿಎಂಯು ವಿಭಾಗ)ರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಐಎಎಸ್, ಐಪಿಎಸ್, ಐಎಫ್ಎಸ್ ಗಳ ಆಡಳಿತ ಸೇವೆಯಲ್ಲಿರುವ ನಿಯಮಗಳ ಪ್ರಕಾರ ಅಧಿಕಾರಿಯ 15 ವರ್ಷಗಳ ಸೇವೆ ಮತ್ತು 25 ವರ್ಷಗಳ ಸೇವೆ ನಂತರ ಆತನ ಕಾರ್ಯನಿರ್ವಹಣೆಯ ಪರಿಶೀಲನೆ ನಡೆಯುತ್ತದೆ. ಇದು ಭಾರತೀಯ ನಾಗರಿಕ ಸೇವೆಯಲ್ಲಿ ಹಿಂದಿನಿಂದಲೂ ಬಂದ ರೂಢಿ ನಿಯಮ.
ರಾಜ್ಯ ಕೇಡರ್, ಸೇವಾ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತು ವಾರ್ಷಿಕ ಗೌಪ್ಯ ವರದಿಗಳನ್ನು ನೋಡಿದಾಗ ಇಬ್ಬರು ಅಧಿಕಾರಿಗಳು ಕಳಪೆ ಸಾಧನೆ ಮಾಡಿದ್ದು ಅವರಿಗೆ ನಿವೃತ್ತಿ ನೀಡುವಂತೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡಿವೆ.
ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಚೋಹನ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿದ್ದು ರ್ಯಾಂಕ್ ಆಫೀಸರ್ ಆಗಿದ್ದಾರೆ. ಅವರು ಅಕ್ರಮ ಆಸ್ತಿ ಹೊಂದಿದ ಆರೋಪ ಎದುರಿಸುತ್ತಿದ್ದರು. ಅರುಣಾಚಲ ಪ್ರದೇಶದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಉಳಿದಿದ್ದರು.
ದೇವಾಂಗಣ ಇನ್ಸ್ ಪೆಕ್ಟರ್ ಜನರಲ್ ಪೊಲೀಸ್ ಆಗಿದ್ದು ರ್ಯಾಂಕ್ ಅಧಿಕಾರಿಯಾಗಿದ್ದಾರೆ. 1998ರಲ್ಲಿ ಕಳ್ಳತನ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಇಲಾಖಾ ಮಟ್ಟದ ತನಿಖೆಯನ್ನು ಎದುರಿಸುತ್ತಿದ್ದರು.
ಅವಧಿಗೆ ಮುನ್ನ ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದುತ್ತಿರುವುದು ಇದು ಸುಮಾರು ಎರಡು ದಶಕಗಳ ನಂತರ. 20 ವರ್ಷಗಳ ಹಿಂದೆ ಮಹಾರಾಷ್ಟ್ರ ವಿಭಾಗದಲ್ಲಿ ಇಬ್ಬರು ಅಧಿಕಾರಿಗಳು ಇದೇ ರೀತಿ ಅವಧಿಗೆ ಮುನ್ನ ನಿವೃತ್ತರಾಗಿದ್ದರು.
ಕಡ್ಡಾಯ ನಿವೃತ್ತಿ ಏನು ಹೇಳುತ್ತದೆ?: ನಿಯಮ ಪ್ರಕಾರ, ಅಧಿಕಾರಿಗಳಿಗೆ ನೊಟೀಸ್ ನೀಡಿ 3 ತಿಂಗಳ ವೇತನ ಮತ್ತು ಸಂಪುಟದ ನೇಮಕ ಸಮಿತಿ ಅನುಮೋದನೆ ನೀಡಿದ ಕಡ್ಡಾಯ ನಿವೃತ್ತಿ ಆದೇಶವನ್ನು ನೀಡಲಾಗುತ್ತದೆ. ನಿಯಮ ಪ್ರಕಾರ ಕಡ್ಡಾಯ ನಿವೃತ್ತಿ ಶಿಕ್ಷೆಯೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಕಡ್ಡಾಯ ನಿವೃತ್ತಿ ಪಡೆದವರು ನಿವೃತ್ತಿ ನಂತರದ ಸರ್ಕಾರದ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ. ನಿಯಮ ಪ್ರಕಾರ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ನಿವೃತ್ತಿ ಹೊಂದುವ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿ 3 ತಿಂಗಳ ವೇತನ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ.
ಅಖಿಲ ಭಾರತ ಸೇವೆಗಳ ಪ್ರಯೋಜನಗಳ ಕಾನೂನು 1958ರ ಪ್ರಕಾರ, ಕಡ್ಡಾಯ ನಿವೃತ್ತಿಯನ್ನು 16(3)ರ ನಿಯಮದಡಿ ಸೂಚಿಸಲಾಗಿದೆ. ಇದರ ಪ್ರಕಾರ ಆಡಳಿತ ಸೇವೆ ಅಧಿಕಾರಿಯ 15 ವರ್ಷದ ಅರ್ಹತಾ ಸೇವೆ ನಂತರ ಅಥವಾ 25 ವರ್ಷಗಳ ಸೇವೆ ಅಥವಾ ಅಧಿಕಾರಿ 50 ವರ್ಷಗಳಾದ ನಂತರ ಆತನ ಸೇವೆಯ ಪರಾಮರ್ಶೆ ನಡೆಸಲಾಗುತ್ತದೆ.