ನವದೆಹಲಿ: ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್ ಹಾಗೂ ಅವರ ಸಹವರ್ತಿಗಳಿಗೆ ಸಂಬಂಧಿಸಿದ 78 ಬ್ಯಾಂಕ್ ಖಾತೆಗಳು ಮತ್ತು ರಿಯಲ್ ಎಸ್ಟೇಟ್ ನಲ್ಲಿ 100 ಕೋಟಿ ರುಪಾಯಿ ಹೂಡಿಕೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ), ಸದ್ಯದಲ್ಲೇ ನಾಯ್ಕ್ ನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಕಳೆದ ವರ್ಷ ನವೆಂಬರ್ ನಲ್ಲಿ ಝಾಕಿರ್ ನಾಯ್ಕ್ ವಿರುದ್ಧ ಉಗ್ರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎನ್‌ಐಎ ತನಿಖೆ ನಡೆಸುತ್ತಿದೆ. ನಾಯಕ್ ಹಾಗೂ ಆತನ ಸಹವರ್ತಿ ಸಂಸ್ಥೆಗಳು 100 ಕೋಟಿ ರುಪಾಯಿಗೂ ಅಧಿಕ ಹಣವನ್ನು ಮುಂಬೈ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿರುವ ಬಗ್ಗೆ ಹಾಗೂ ದೇಶದ ವಿವಿಧ ಬ್ಯಾಂಕ್‌ಗಳ 78 ಖಾತೆಗಳಲ್ಲಿ ನಡೆಸಿರುವ ವಹಿವಾಟು ವಿವರ ಪರಿಶೀಲಿಸಲಾಗುತ್ತಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣಗಳನ್ನು ಪ್ರಸ್ತುತ ಪಡಿಸಿರುವ ಆರೋಪದಡಿ ಎನ್‌ಐಎ ಜಾಕಿರ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿದೆ.
ಈ ಸಂಬಂಧ ಈಗಾಗಲೇ ನಾಯ್ಕ್ ಸಹೋದರಿ ನೈಲಾಹ್ ನೌಷದ್ ನೂರಾನಿ ಸೇರಿದಂತೆ ಆತನ 20 ಸಹಚರರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದ್ದು, 78 ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ವಿದೇಶದಲ್ಲಿರುವ ಜಾಕಿರ್ ನಾಯಕ್ ನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ನಾಯಕ್ ಒಡೆತನದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‌ಎಫ್) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.