ನವದೆಹಲಿ: ಅಧಿಕ ತೂಕವಿದ್ದ 57 ಮಂದಿ ಕ್ಯಾಬಿನ್ ಸಿಬ್ಬಂದಿಯನ್ನು ಸರ್ಕಾರಿ ಮಾಲೀಕತ್ವದ ಏರ್ ಇಂಡಿಯಾ ಸಂಸ್ಥೆ ಫ್ಲೈಯಿಂಗ್ ಡ್ಯೂಟಿಯಿಂದ ತಾತ್ಕಾಲಿಕವಾಗಿ ತೆಗದು ಹಾಕಿದ್ದಾರೆ. ಈ 57 ಸಿಬ್ಬಂದಿಯನ್ನು ಗ್ರೌಂಡ್ ಡ್ಯೂಟಿಗೆ ನಿಯೋಜಿಸಲಾಗಿದೆ.
57 ಮಂದಿ ಸಿಬ್ಬಂದಿಯಲ್ಲಿ ಗಗನ ಸಖಿಯರು ಕೂಡ ಇದ್ದು, ಸಂಸ್ಥೆ ನೀಡಿರುವ ಸಮಯದೊಳಗೆ ತೂಕ ಇಳಿಸಿಕೊಂಡು ಶೇಪ್ ಅಪ್ ಮಾಡಿಕೊಳ್ಳಲು ಸೂಚಿಸಿದೆ. ತೂಕ ಕಡಿಮೆ ಮಾಡಿಕೊಳ್ಳದಿದ್ದರೇ ಶಾಶ್ವತವಾಗಿ ಗ್ರೌಂಡ್ ಡ್ಯೂಟಿಯಲ್ಲೇ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾದಲ್ಲಿ 3,800 ಕ್ಯಾಬಿನ್ ಸಿಬ್ಬಂದಿ ಇದ್ದು, ಇವರಲ್ಲಿ 2,500 ಮಹಿಳೆಯರೇ ಇದ್ದಾರೆ. ಸುಮಾರು 2,200 ಸದಸ್ಯರು ಪರ್ಮನೆಂಟ್ ಸಿಬ್ಬಂದಿಯಾಗಿದ್ದಾರೆ.
ವಿಮಾನಯಾನ ನಿಯಂತ್ರಣ ನಿಯಮಗಳ ಪ್ರಕಾರ ಕ್ಯಾಬಿನ್ ಸಿಬ್ಬಂದಿಯನ್ನು ಫಿಟ್ ಎಂದು ಘೋಷಿಸಲಾಗುತ್ತದೆ. ಇದರಲ್ಲಿ ಟೆಪೊರರಿ ಫಿಟ್ ಮತ್ತು ಪರ್ಮನೆಂಟ್ ಫಿಟ್ ಎಂದು ವಿಭಾಗಿಸಲಾಗುತ್ತದೆ. ಕಾಲಕಾಲಕ್ಕೆ ಈ ಸಿಬ್ಬಂದಿಗೆ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸುತ್ತಿರುತ್ತಾರೆ. ಈ ವೇಳೆ ಸಿಬ್ಬಂದಿಯ ತೂಕದಲ್ಲಿ ಏರಿಕೆಯಾಗಿರುವುದು ತಿಳಿದು ಬಂದಿದೆ. ಹೀಗಾಗಿ ತೂಕ ಹೆಚ್ಚಿರುವ ಸಿಬ್ಬಂದಿ ಶೇಪ್ ಮಾಡಿಕೊಂಡು ವಾಪಸ್ ಫ್ಲೈಯಿಂಗ್ ಡ್ಯೂಟಿಗೆ ಬರಲು ಅವಕಾಶ ನೀಡಲಾಗುತ್ತದೆ.
ಕಳೆದ ಒಂದೂವರೆ ವರ್ಷದಲ್ಲಿ ಎರಡನೇ ಬಾರಿಗೆ ಈ ಕ್ರಮ ಕೈಗೊಳ್ಳಲಾಗಿದೆ. 2015ರ ಸೆಪ್ಟಂಬರ್ ನಲ್ಲಿ 125 ಮಂದಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.