ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಜಲವಿದ್ಯುತ್ ಯೋಜನೆ ಸ್ಥಗಿತಗೊಳಿಸಿ: ಭಾರತಕ್ಕೆ ಪಾಕ್ ತಾಕೀತು
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದಲ್ಲಿ ಭಾರತ ಸರ್ಕಾರ ನಿರ್ಮಾಣ ಮಾಡುತ್ತಿರುವ ಕಿಶೆನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಪಾಕಿಸ್ತಾನ ಭಾರತಕ್ಕೆ ತಾಕೀತು ಮಾಡಿದೆ.
ಭಾರತ ಸರ್ಕಾರ ನೀಲಮ್ ಮತ್ತು ಚೆನಾಬ್ ನದಿ ಪಾತ್ರದಲ್ಲಿ ಕಿಶೆನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದರ್ ನೇತೃತ್ವದ ಸಮಿತಿಯೊಂದು ಸಭೆ ಸೇರಿ ನಿರ್ಣಯ ಕೈಗೊಂಡಿದ್ದು, ಪ್ರಸ್ತುತ ವಿವಾದದಲ್ಲಿರುವ ಯೋಜನೆಗಳನ್ನು ಸ್ಥಗಿತಗೊಳಿಸುವುದಷ್ಟೇ ಅಲ್ಲದೇ, ಸಿಂಧೂ ನದಿ ನೀರು ಒಪ್ಪಂದದ ಅಡಿಯಲ್ಲಿ ನಿರ್ಮಾಣ ಮಾಡಲು ಭಾರತ ಸರ್ಕಾರ ಉದ್ದೇಶಿಸಲಾಗಿರುವ ಜಲಾಶಯ ನಿರ್ಮಾಣ, ಜಲವಿದ್ಯುತ್ ಘಟಕ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳ ಮಾಹಿತಿಯನ್ನು ವಿಶ್ವಬ್ಯಾಂಕ್ ಹಾಗೂ ಭಾರತ ತನಗೆ ತಿಳಿಸಬೇಕೆಂದು ಕೇಳಿದೆ.
ಇದರೊಂದಿಗೆ ಉಭಯ ರಾಷ್ಟ್ರಗಳ ನಡುವೆ ಇರುವ ಸಿಂಧೂ ನದಿ ನೀರು ಹಂಚಿಕೆ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಮಧ್ಯಸ್ಥಿಕೆಯ ನ್ಯಾಯಾಲಯವೊಂದನ್ನು ಸ್ಥಾಪಿಸಬೇಕೆಂದು ವಿಶ್ವಬ್ಯಾಂಕ್ ಗೆ ಪಾಕಿಸ್ತಾನ ಮನವಿ ಮಾಡಿದ್ದು, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿಳಂಬ ಮಾಡದೇ ತನ್ನ ಪಾತ್ರ ನಿರ್ವಹಿಸುವುದು ವಿಶ್ವಬ್ಯಾಂಕ್ ನ ಜವಾಬ್ದಾರಿಯಾಗಿದೆ ಎಂದು ಪಾಕಿಸ್ತಾನ ಹೇಳಿದೆ. ವಿಶ್ವಬ್ಯಾಂಕ್ ಮಧ್ಯಸ್ಥಿಕೆಯ ನ್ಯಾಯಾಲಯ ಸ್ಥಾಪಿಸುವವರೆಗೆ ಭಾರತ ಜಮ್ಮು-ಕಾಶ್ಮೀರದ ನದಿಗಳಿಗೆ ಜಲಾಶಯ ನಿರ್ಮಿಸುವುದು ಹಾಗೂ ಜಲವಿದ್ಯುತ್ ಘಟಕಗಳ ಕಾಮಗಾರಿಗಳನ್ನು ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಪಾಕಿಸ್ತಾನ ಹೇಳಿದೆ. ಅಷ್ಟೇ ಅಲ್ಲದೇ ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಎಲ್ಲಾ ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಭಾರತ ವಿಶ್ವಬ್ಯಾಂಕ್ ಹಾಗೂ ತನ್ನೊಂದಿಗೆ ಹಂಚಿಕೊಳ್ಳಬೇಕೆಂದು ಪಾಕಿಸ್ತಾನ ಪಟ್ಟು ಹಿಡಿದಿದೆ.
ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಮರುಪರಿಶೀಲಿಸುವ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಬೆದರಿರುವ ಪಾಕಿಸ್ತಾನ, ಕಾಗಮಾರಿಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಮಧ್ಯಸ್ಥಿಕೆ ನ್ಯಾಯಾಲಯ ಸ್ಥಾಪಿಸಬೇಕೆಂಬ ಬೇಡಿಕೆಗೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.