ವಿಜಿಯನಗರಂ: ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ಉಂಟಾದ ರೈಲು ದುರಂತದ ಬಗ್ಗೆ ತನಿಖೆ ನಡೆಸಲು ರೈಲ್ವೆ ಸಚಿವ ಸುರೇಶ್ ಪ್ರಭು ಆದೇಶ ನೀಡಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಅಲ್ಲದೆ ಘಟನೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಕ್ಸಲ್ ಪೀಡಿತ ರಾಜ್ಯ ಒಡಿಶಾ ಸಮೀಪ ಈ ದುರ್ಘಟನೆ ಸಂಭವಿಸಿರುವುದರಿಂದ ದುಷ್ಕರ್ಮಿಗಳು ಹಳಿಯನ್ನು ಹಾಳುಗೆಡವಿ ವಿಧ್ವಂಸಕ ಕೃತ್ಯವೆಸಗಿದರಬಹುದು ಎಂದು ರೈಲ್ವೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆಂಧ್ರ ಪ್ರದೇಶ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಕೇಂದ್ರ ಸರ್ಕಾರದ 2 ಲಕ್ಷ ರೂಪಾಯಿ ಪರಿಹಾರದ ಜೊತೆಗೆ ನಮ್ಮ ಸರ್ಕಾರ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.