ಅಪಘಾತ ಸಂಭವಿಸಿದ ಸ್ಥಳದ ದೃಶ್ಯ
ಭುವನೇಶ್ವರ್: ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಅಪಘಾತದ ಹಿಂದೆ ಮಾವೋವಾದಿಗಳ ಪಾತ್ರವನ್ನು ಒಡಿಶಾ ಪೊಲೀಸರು ತಳ್ಳಿ ಹಾಕಿದ್ದಾರೆ.
ಜಗ್ದಲ್ಪುರ್-ಭುವನೇಶ್ವರ ಎಕ್ಸ್ ಪ್ರೆಸ್ ರೈಲು ಅಪಘಾತದ ಹಿಂದೆ ಮಾವೋವಾದಿಗಳ ಪಾತ್ರವಿರುವ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಒಡಿಶಾ ಡಿಜಿಪಿ ಕೆ.ಬಿ.ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಜೊತೆ ಪರಾಮರ್ಶೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ಪ್ರತಿಕ್ರಿಯೆ ನೀಡಿದರು.
ನಕ್ಸಲ್ ಪೀಡಿತ ರಾಜ್ಯಕ್ಕೆ ಸಮೀಪದಲ್ಲಿ ಅಪಘಾತ ಸಂಭವಿಸಿರುವುದರಿಂದ ಮಾವೋವಾದಿಗಳು ರೈಲ್ವೆ ಹಳಿಗಳನ್ನು ನಾಶಪಡಿಸಿ ಅಪಘಾತವನ್ನುಂಟುಮಾಡಿರಬಹುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದರು.
ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಅಧಿಕಾರಿಯೊಬ್ಬರು ಅಪಘಾತದಲ್ಲಿ ನಕ್ಸಲ್ ರ ಭಾಗಿಯ ಶಂಕೆಯನ್ನು ನಿರಾಕರಿಸಿದ್ದಾರೆ.
ಮಾವೋವಾದಿಗಳ ಪಾಲ್ಗೊಳ್ಳುವಿಕೆಯನ್ನು ನಾವು ಸಂಪೂರ್ಣವಾಗಿ ತಳ್ಳಿಹಾಕುತ್ತೇವೆ. ಕುನೆರು ಮಾವೋವಾದಿ ಪೀಡಿತ ವಲಯವಲ್ಲ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.