ಅಖಿಲೇಶ್ ಯಾದವ್ - ರಾಹುಲ್ ಗಾಂಧಿ
ಲಖನೌ: ಸೀಟು ಹಂಚಿಕೆಗೆ ಸಂಬಂಧಿಸದಂತೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವಿನ ಬಿಕ್ಕಟ್ಟು ಪರಿಹಾರವಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 105 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಭಾನುವಾರ ಕಾಂಗ್ರೆಸ್ ಹೇಳಿದೆ.
ನಿನ್ನೆಯಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಗೆ 99 ಸೀಟ್ ಗಳ ಆಫರ್ ನೀಡಿದ್ದರು. ಆದರೆ ಇದಕ್ಕೆ ಒಪ್ಪಂದ ಕಾಂಗ್ರೆಸ್ 121 ಸ್ಥಾನಗಳ ಬೇಡಿಕೆಯಿಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ 105 ಸ್ಥಾನಗಳನ್ನು ಒಪ್ಪಿಕೊಳ್ಳುವ ಮೂಲಕ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಒಟ್ಟು 403 ಕ್ಷೇತ್ರಗಳ ಪೈಕಿ ಸಮಾಜವಾದಿ ಪಕ್ಷ 298 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆರಂಭದಲ್ಲಿ 121 ಸೀಟುಗಳನ್ನು ಬಯಸಿದ್ದ ಕಾಂಗ್ರೆಸ್ಗೆ ಅಖಿಲೇಶ್ ಯಾದವ್ ಕೇವಲ 99 ಸೀಟುಗಳನ್ನು ನೀಡಿದ್ದು ಮುನಿಸಿಗೆ ಕಾರಣವಾಗಿತ್ತು.
ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಇಂದು ಪರಸ್ಪರ ಚರ್ಚೆಯ ನಂತರ ಮೈತ್ರಿ ಮಾತುಕತೆ ಯಶಸ್ವಿಯಾಗಿದೆ.