ದೇಶ

ಜ.31ರಂದು ಮತ್ತೊಂದು ಅಣ್ವಸ್ತ್ರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಗೆ ಭಾರತ ಸಜ್ಜು

Sumana Upadhyaya
ಭುವನೇಶ್ವರ್: ದೂರವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆ ಸಾಮರ್ಥ್ಯವನ್ನು ಹೊಂದಿರುವ ಜಲಾಂತರ್ಗಾಮಿ ಉಡಾವಣೆಯ ಕೆ ಸರಣಿಯ ಕ್ಷಿಪಣಿಯ  ಹೊಸ ಪ್ರಯೋಗಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ತಯಾರಾಗಿದ್ದು, ಈ ತಿಂಗಳಾಂತ್ಯಕ್ಕೆ ನೀರಿನಡಿಯಿಂದ ಉಡ್ಡಯನ ಪರೀಕ್ಷೆ ನಡೆಸಲಿದೆ.
ಕಾರ್ಯಕ್ರಮದ ನಿಗದಿಯಂತೆ ಎಲ್ಲಾ ಕೆಲಸಗಳು ನಡೆದರೆ 3.500 ಕಿಲೋ ಮೀಟರ್ ವರೆಗೆ ನೆಗೆಯಬಲ್ಲ  ಸ್ವದೇಶಿ ನಿರ್ಮಿತ ಅತ್ಯಂತ ಪ್ರಬಲ ಜಲಾಂತರ್ಗಾಮಿ ಕ್ಷಿಪಣಿ  ಜನವರಿ 31ರಂದು ಉಡ್ಡಯನಗೊಳ್ಳಲಿದೆ.
50 ಮೀಟರ್ ಆಳದಿಂದ ನೀರಿನೊಳಗಿಂದ ಉಡ್ಡಯನ ಮಾಡುವಂತೆ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗಿದ್ದು ಈ ಸಲ ವಿಜ್ಞಾನಿಗಳು ಸಮುದ್ರದ ಆಳದಿಂದ ಬಂಗಾಲಕೊಲ್ಲಿಯಲ್ಲಿ 20ರಿಂದ 30 ಮೀಟರ್ ಆಳದಿಂದ ಉಡಾವಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಈ ಕ್ಷಿಪಣಿ 12 ಮೀಟರ್ ಉದ್ದ ಮತ್ತು 1.3 ಮೀಟರ್ ಸುತ್ತಳತೆಯನ್ನು ಹೊಂದಿದ್ದು ಸುಮಾರು 17 ಟನ್ ತೂಕವನ್ನು ಒಳಗೊಂಡಿದೆ. ಸುಮಾರು 2 ಟನ್ ಸಿಡಿತಲೆಯನ್ನು ಹೊತ್ತು ಸಾಗಲಿದೆ. 
ಭಾರತ ದೇಶದ ಮೊದಲ ಸ್ವದೇಶಿ ನಿರ್ಮಿತ ಪರಮಾಣು ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ನ್ನು ಈಗಾಗಲೇ ಭಾರತೀಯ ನೌಕಾಪಡೆಗೆ ಸೇರಿಸಲಾಗಿದ್ದು, ಈ ಜಲಾಂತರ್ಗಾಮಿ ಕೆ ಸರಣಿಯ ಕ್ಷಿಪಣಿಗಳನ್ನು ಅಳವಡಿಸಿರಲಾಗುತ್ತದೆ.
700 ಕಿಲೋ ಮೀಟರ್ ನ ಕೆ-15 ಕ್ಷಿಪಣಿ ಹೊರತುಪಡಿಸಿ ಭಾರತ ಇನ್ನಷ್ಟು ಕ್ಷಿಪಣಿಗಳನ್ನು ಹೊಂದಿದೆ. ಎಸ್ಎಲ್ ಬಿಎಮ್ ಕೆ-5 5,000 ಕಿಲೋ ಮೀಟರ್ ಎತ್ತರದವರೆಗೆ ಜಿಗಿಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದು ಅದು ಅಭಿವೃದ್ಧಿಯ ಹಂತದಲ್ಲಿದೆ.
ಎಲ್ಲಾ ಕೆ ಸರಣಿಯ ಕ್ಷಿಪಣಿಗಳು ಅತ್ಯಂತ ವೇಗವಾಗಿ, ಹಗುರವಾಗಿ ಮತ್ತು ಹೆಚ್ಚು ಸದ್ದಿಲ್ಲದ್ದಾಗಿದೆ.ಕೆ ಸರಣಿಯ ಕ್ಷಿಪಣಿಗಳಲ್ಲದೆ ಭಾರತ ಬ್ರಹ್ಮೋಸ್ ಸೂಪರ್ ಸಾನಿಕ್ ನೌಕಾಯಾನ ಕ್ಷಿಪಣಿಗಳನ್ನು ಹೊಂದಿದೆ.
ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಉಡಾವಣೆ ಮಾಡುತ್ತಿರುವ ಭಾರತ ಭೂಮಿ, ವಾಯು ಮತ್ತು ಸಮುದ್ರದ ಆಳದಿಂದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶಗಳಾದ ರಷ್ಯಾ, ಅಮೆರಿಕಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ದೇಶಗಳ ಸಾಲಿನಲ್ಲಿ ನಿಲ್ಲಲು ಪ್ರಯತ್ನಿಸುತ್ತಿದೆ.
SCROLL FOR NEXT