ಗಣರಾಜ್ಯೋತ್ಸವ ಮುನ್ನಾದಿನ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧ ನಿರ್ಧಾರ ಉತ್ತಮ ಎಂದಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ನಗದು ರಹಿತ ವಹಿವಾಟು ನಡೆಸುವುದರಿಂದ ಆರ್ಥಿಕತೆಯಲ್ಲಿ ಪಾರದರ್ಶಕತೆ ಸುಧಾರಿಸುತ್ತಾ ಹೋಗುತ್ತದೆ ಎಂದು ಬುಧವಾರ ಹೇಳಿದ್ದಾರೆ.
68ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಇಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕಪ್ಪು ಹಣದ ಚಲಾವಣೆಯನ್ನು ತಡೆಗಟ್ಟಲು ಜಾರಿಗೆ ತಂದಿರುವ ನೋಟುಗಳ ಅಮಾನ್ಯತೆ ಕ್ರಮ ತಾತ್ಕಾಲಿಕವಾಗಿ ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುವಂತೆ ಮಾಡಿರಬಹುದು, ಆದರೆ ದೀರ್ಘಾವಧಿಯಲ್ಲಿ ಇದರಿಂದ ಉಪಯೋಗವಿದೆ ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಬೆಂಬಲಿಸಿದರು.ಹೆಚ್ಚೆಚ್ಚು ವಹಿವಾಟುಗಳು ನಗದುರಹಿತವಾದರೆ ಆರ್ಥಿಕತೆಯಲ್ಲಿ ಹೆಚ್ಚು ಪಾರದರ್ಶಕತೆ ಉಂಟಾಗುತ್ತದೆ ಎಂದು ಹೇಳಿದರು.
ಸ್ವತಂತ್ರ ಭಾರತದಲ್ಲಿ ಹುಟ್ಟಿದ ಮೂರನೇ ತಲೆಮಾರಿನ ಭಾರತೀಯರು ಹಲವಾರು ವರ್ಷಗಳ ಹಿಂದಿನ ವಸಾಹತುಶಾಹಿ ಆಡಳಿತದಡಿಯಲ್ಲಿ ಇರಬೇಕೆಂದೇನಿಲ್ಲ. ಇಂದಿನ ತಲೆಮಾರಿನವರಿಗೆ ಶಿಕ್ಷಣ ಪಡೆಯುವ ಸೌಲಭ್ಯವಿದೆ. ಹೆಚ್ಚೆಚ್ಚು ಅವಕಾಶಗಳು ಸಿಗುತ್ತಿದ್ದು ಮುಕ್ತ ರಾಷ್ಟ್ರದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ ಎಂದರು.
ರಾಷ್ಟ್ರಪತಿ ಮುಖರ್ಜಿಯವರು ತಮ್ಮ ಭಾಷಣದಲ್ಲಿ ದೇಶದ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಡಿ ವೀರಮರಣ ಕಾಣುವ ಯೋಧರನ್ನು ಸ್ಮರಿಸಿದರು. ಭಯೋತ್ಪಾದನೆಯ ಕರಿ ನೆರಳಿನಿಂದ ಆಚೆ ಬರಲು ಅದರ ವಿರುದ್ಧ ದೃಢವಾಗಿ ಹೋರಾಡಬೇಕಿದೆ ಎಂದರು.
ಪ್ರತಿ ಐವರಲ್ಲಿ ಒಬ್ಬ ಭಾರತೀಯ ಬಡತನ ರೇಖೆಯಿಂದ ಕೆಳಗೆ ಜೀವನ ಮಾಡುತ್ತಿದ್ದು ದೇಶದ ಆರ್ಥಿಕತೆ ಹಂತ ಹಂತವಾಗಿ ಶೇಕಡಾ 10ಕ್ಕಿಂತ ಹೆಚ್ಚು ಬೆಳವಣಿಗೆ ಹೊಂದಬೇಕಿದೆ. ಆರ್ಥಿಕ ಚಟುವಟಿಕೆಗಳು ಇನ್ನಷ್ಟು ಗರಿಗೆದರಬೇಕು. ಭಾರತೀಯರ ಸಾಂಸ್ಕತಿಕ ಸಂಸ್ಕೃತಿ ಮತ್ತು ಸಹನೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ಇನ್ನೂ ಪರೀಕ್ಷೆ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಭಾರತೀಯನ ಕಣ್ಣೀರು ಒರೆಸುವ ಗಾಂಧೀಜಿಯವರ ಕನಸು ಇನ್ನೂ ನನಸಾಗಿಲ್ಲ ಎಂದರು.
ಭಾರತಾಂಬೆಯ ಮುಂದೆ ನಾವೆಲ್ಲಾ ಮಕ್ಕಳೂ ಸಮಾನರು. ನಾವು ಯಾವ ಧರ್ಮ, ಜಾತಿಯಲ್ಲಿರಲಿ ಭಾರತದ ಏಳಿಗೆಗೆ ಒಟ್ಟಾಗಿ ದೇಶದ ಏಕತೆ, ಸಮಗ್ರತೆಗೆ ಹೋರಾಡಬೇಕಿದೆ. ನಮ್ಮ ದೇಶ ಸರಿಯಾದ ವಿಷಯಕ್ಕೆ ವಾದಿಸುವ ಭಾರತೀಯನನ್ನು ಬಯಸುತ್ತದೆಯೇ ಹೊರತು ಅಸಹಿಷ್ಣುತೆಯ ಭಾರತೀಯನನ್ನಲ್ಲ. ಸಹಿಷ್ಣುತೆ, ತಾಳ್ಮೆ ಮತ್ತು ಉತ್ತಮ ಮನಸ್ಸು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಸಂಸತ್ತು ಮತ್ತು ವಿಧಾನಮಂಡಲ ಕಲಾಪಗಳು ಸರಿಯಾಗಿ ನಡೆಯದಿರುವ ಬಗ್ಗೆ ತಮ್ಮ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದ ರಾಷ್ಟ್ರಪತಿಗಳು, ಚರ್ಚೆ ಮತ್ತು ನಿರ್ಧಾರದಲ್ಲಿ ಗಮನವನ್ನು ಕೇಂದ್ರೀಕರಿಸಲು ಸಾಮೂಹಿಕವಾಗಿ ಪ್ರಯತ್ನಿಸಬೇಕು ಎಂದು ರಾಜಕೀಯ ಮುಖಂಡರಿಗೆ ಕರೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos