ದೇಶ

"ನಾನು ನಿರಪರಾಧಿ, ಕೃಷ್ಣಮೃಗ ಸತ್ತಿದ್ದು ಸಹಜವಾಗಿ": ಕೋರ್ಟ್ ನಲ್ಲಿ ನಟ ಸಲ್ಮಾನ್ ಹೇಳಿಕೆ

Srinivasamurthy VN

ಜೋಧ್ ಪುರ: ತೀವ್ರ ಕುತೂಹಲ ಕೆರಳಿಸಿರುವ ಕೃಷ್ಣಮೃಗ ಭೇಟೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಶುಕ್ರವಾರ ಹೇಳಿಕೆ ದಾಖಲು ಮಾಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ತಾನು ನಿರಪರಾಧಿ  ಎಂದು ಹೇಳಿಕೊಂಡಿದ್ದಾರೆ.

ರಾಜಸ್ಥಾನದ ಜೋಧ್ ಪುರ ವಿಶೇಷ ನ್ಯಾಯಾಲಯದಲ್ಲಿ 1998ರ ಕೃಷ್ಣಮೃಗ ಭೇಟೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ಸಂಬಂಧ ಇಂದು ನ್ಯಾಯಾಲಯಕ್ಕೆ ಆಗಮಿಸಿದ ನಟ ಸಲ್ಮಾನ್ ಖಾನ್ ತಮ್ಮ ಹೇಳಿಕೆ ನೀಡಿದ್ದಾರೆ.  "ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದು, ನನ್ನು ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅಲ್ಲದೆ ನನ್ನ ವಿರುದ್ಧ ಪೊಲೀಸರು ನೀಡಿರುವ ಸಾಕ್ಷ್ಯಗಳು ಸುಳ್ಳು ಎಂದು ನಟ ಸಲ್ಮಾನ್ ಖಾನ್ ಹೇಳಿದ್ದಾರೆ.

ಇದಕ್ಕೂ ಮೊದಲು ನವಡೆದ ವಿಚಾರಣೆಯಲ್ಲಿ ತಮ್ಮ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ನಟ ಸಲ್ಮಾನ್ ಖಾನ್, ಸೈಫ್ ಅಲಿಖಾನ್, ನಟಿ ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಅವರು ಹಮ್ ಸಾಥ್ ಸಾಥ್ ಹೇ  ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು.  1998 ಅಕ್ಟೋಬರ್ 1ರ ರಾತ್ರಿ ಜಿಪ್ಸಿ ವಾಹನದಲ್ಲಿ ಸ್ಥಳೀಯ ಗೈಡ್ ಗಳ ಸಹಾಯದಿಂದ ಅರಣ್ಯ ಪ್ರವೇಶ ಮಾಡಿದ್ದರು. ಜಿಪ್ಸಿಯನ್ನು ನಟ ಸೈಫ್ ಅಲಿಖಾನ್ ಚಲಾಯಿಸುತ್ತಿದ್ದರು. ಕಾರಿನ  ಹಿಂಬದಿಯಲ್ಲಿ ಶಾಟ್ ಗನ್ ಗಳಿದ್ದವು. ಸಂರಕ್ಷಿತಾರಣ್ಯವನ್ನು ಅಕ್ರಮವಾಗಿ ಪ್ರವೇಶಿಸಿದ ನಟ ಸಲ್ಮಾನ್ ಕೃಷ್ಣಮೃಗ ಹಾಗೂ ಚಿಂಕಾರಗಳನ್ನು ಭೇಟೆಯಾಡಿದ್ದಾರೆ ಎಂದು ವಾದ ಮಂಡಿಸಿದರು.

ಆದರೆ ಪ್ರಾಸಿಕ್ಯೂಷನ್ ವಾದವನ್ನು ತಳ್ಳಿ ಹಾಕಿದ ನಟ ಸಲ್ಮಾನ್ ಖಾನ್ ಚಿತ್ರೀಕರಣದ ಬಳಿಕ ತಾವು ಅರಣ್ಯಕ್ಕೆ ಹೋಗಲೇ ಇಲ್ಲ. ನೇರವಾಗಿ ಹೊಟೆಲ್ ಗೆ ಆಗಮಿಸಿದೆವು ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

ಕೃಷ್ಣಮೃಗ ಸತ್ತಿದ್ದು ಸಹಜ ಸಾವಿನಿಂದಾಗಿ!
ಇನ್ನು ಅಂದು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದ ಕೃಷ್ಣಮೃಗ ಸತ್ತಿದ್ದು ಸಹಜ ಸಾವಿನಿಂದಾಗಿ. ಆದರೆ ಪ್ರಾಸಿಕ್ಯೂಷನ್ ಹಾಗೂ ಪೊಲೀಸರು ಆ ಪ್ರಾಣಿ ಸಾವಿಗೆ ನಾನೇ ಕಾರಣ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥೆ ಡಾ.ನೆಪಾಲಿಯಾ ಅವರೇ ಹೇಳಿರುವಂತೆ ಅಂದು ಸಾವನ್ನಪ್ಪಿದ್ದ ಕೃಷ್ಣಮೃಗ ಸಹಜವಾಗಿ ಸಾವನ್ನಪ್ಪಿತ್ತು ಎಂದು ಹೇಳಿದ್ದಾರೆ. ಹೀಗಾಗಿ ಪ್ರಾಣಿಯ ಸಾವಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಇಂದಿನ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರು ನಟ ಸಲ್ಮಾನ್ ಖಾನ್ ಗೆ ಸುಮಾರು 65 ಪ್ರಶ್ನೆಗಳನ್ನು ಕೇಳಿದ್ದು, ಈ ವೇಳೆ 28 ಸಾಕ್ಷ್ಯಗಳ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜಿಪ್ಸಿಯಲ್ಲಿ ಸಿಕ್ಕ ರಕ್ತದೆ ಕಲೆಗಳು ಹಾಗೂ ಕೃಷಮೃಗದ ಕೂದಲಿನ ಕುರಿತು ಪ್ರಶ್ನಿಸಿದಾಗ ಸಲ್ಮಾನ್ ಖಾನ್ ಅಂತಹ ಯಾವುದೇ ಕುರುಹುಗಳು ಜಿಪ್ಸಿಯಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಧರ್ಮದ ಕುರಿತು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ನಟ ಸಲ್ಮಾನ್ ಖಾನ್ ತಾವೊಬ್ಬ "ಇಂಡಿಯನ್" ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 15ಕ್ಕೆ ಮುಂದೂಡಿದೆ.

ಇದೇ ಪ್ರಕರಣದ ಇತರೆ 3 ಪ್ರಕರಣಗಳಲ್ಲಿ ನಟ ಸಲ್ಮಾನ್ ಖಾನ್ ಗೆ ನ್ಯಾಯಾಲಯ ರಿಲೀಫ್ ನೀಡಿದ್ದು, ಇತ್ತೀಚೆಗಷ್ಟೇ ಇದೇ ಪ್ರಕರಣದಡಿಯಲ್ಲಿ ದಾಖಲಾಗಿದ್ದ ಅಕ್ರಮ ಶಸ್ತ್ರಾಸ್ತ್ಪ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ರನ್ನು  ನ್ಯಾಯಾಲಯ ನಿರಪರಾಧಿ ಎಂದು ತೀರ್ಪು ನೀಡಿತ್ತು. ಸಾಕ್ಷ್ಯಾಧಾರಗಳ ಕೊರತೆಯ ಅಧಾರದ ಮೇಲೆ ನ್ಯಾಯಾಲಯ ಸಲ್ಮಾನ್ ಖಾನ್ ರನ್ನು ನಿರ್ದೋಷಿ ಎಂದು ಘೋಷಣೆ ಮಾಡಿತ್ತು.

SCROLL FOR NEXT