4 ದಿನದ ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಸುಷ್ಮಾ ಸಹಾಯ!
ಭೋಪಾಲ್: ಹೃದಯ ಸಮಸ್ಯೆ ಹೊಂದಿದ್ದ 4 ದಿನದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿದ್ದಾರೆ. ಸುಷ್ಮಾ ಸ್ವರಾಜ್ ನೆರವಿನಿಂದ ಪೋಷಕರು ಮಗುವಿಗೆ ದೆಹಲಿಯ ಏಮ್ಸ್ ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದ್ದಾರೆ.
ಜ.23 ರಂದು ಭೋಪಾಲ್ ನಲ್ಲಿ ಜನಿಸಿದ ದೇವೇಶ್ ಶರ್ಮಾ- ವಂದನಾ ಶರ್ಮಾ ಅವರ ಮಗುವಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದದ್ದು ಕಂಡುಬಂದಿದೆ. ಆದರೆ ಅಲ್ಲಿನ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಜ.26 ರಂದು ದೇವೇಶ್, ಟ್ವಿಟರ್ ಮೂಲಕ ಸುಷ್ಮಾ ಸ್ವರಾಜ್ ಅವರ ಸಹಾಯ ಕೇಳಿದ್ದಾರೆ. ತಕ್ಷಣವೇ ಸ್ಪಂದಿಸಿದ ಸುಷ್ಮಾ ಸ್ವರಾಜ್ ತಮ್ಮ ಕಚೇರಿಯ ಸಿಬ್ಬಂದಿಗಳು ಸಂಪೂರ್ಣ ಮಾಹಿತಿ ಪಡೆಯಲು ನೆರವಾಗುವಂತೆ ದೇವೇಶ್ ಅವರ ದೂರವಾಣಿ ಸಂಖ್ಯೆಯನ್ನು ಪಡೆದು ಕಚೇರಿಯ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
ನಂತರ ಸುಷ್ಮಾ ಸ್ವರಾಜ್ ಅವರ ಕಚೇರಿಯ ಸಿಬ್ಬಂದಿಗಳು ದೇವೇಶ್ ಶರ್ಮಾ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ವರದಿಗಳನ್ನು ಭೋಪಾಲ್ ಕಚೇರಿ ಮೂಲಕ ತರಿಸಿಕೊಂಡಿದ್ದು, ವೈದ್ಯರ ಸಲಹೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್, ಏಮ್ಸ್ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ವೈದ್ಯರಾದ ಡಾ. ಬಲರಾಮ್ ತಕ್ಷಣವೇ ಶಸ್ತ್ರಚಿಕಿತ್ಸೆಯಾಗಬೇಕೆಂಬ ಸಲಹೆ ನೀಡಿದ್ದಾರೆ. ಈ ಬಗ್ಗೆ ಮಗುವಿನ ಪೋಷಕರು ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಸಹಾಯದ ನಂತರ ಈಗ ಮಗುವಿನ ಕುಟುಂಬ ಸದಸ್ಯರು ಉತ್ತಮ ವೈದ್ಯಕೀಯ ನೆರವು ಸಿಗುವ ವಿಶ್ವಾಸದಲ್ಲಿದೆ. " ಏರ್ ಆಂಬುಲೆನ್ಸ್ ಮೂಲಕ ಮಗುವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಶರ್ಮಾ ತಿಳಿಸಿದ್ದಾರೆ.