ಶ್ರೀನಗರ: ಸೇನೆ ಹಿಮಪಾತ ರಕ್ಷಣಾ ತಂಡ ಮಂಜುಗಡ್ಡೆ ಅಡಿಯಲ್ಲಿ ಸಿಲುಕಿದ್ದ ಐವರು ಯೋಧರನ್ನು ರಕ್ಷಿಸಿದೆ.
ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಮಚ್ಚಿಲ್ ಪ್ರದೇಶದಲ್ಲಿ ಸೇನಾ ಶಿಬಿರದ ಮೇಲೆ ಭಾರಿ ಪ್ರಮಾಣದ ಹಿಮಪಾತವಾಗಿದ್ದರಿಂದ ಆವರು ಸೈನಿಕರು ಮಂಜುಗಡ್ಡೆಯೊಳಗೆ ಸಿಲುಕಿದ್ದರು ಎಂದು ರಕ್ಷಣಾ ಇಲಾಖೆ ವಕ್ತಾರ ಕಲೋನಿಯಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಐವರು ಯೋಧರು ಹಿಮದೊಳಗೆ ಸಿಲುಕಿಕೊಂಡಿದ್ದರು. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಸೇನೆಯ ರಕ್ಷಣಾ ತಂಡ, ವಿಶೇಷ ಉಪಕರಣಗಳನ್ನು ಬಳಸಿ ಅಹಿತಕರ ವಾಕತಾವರಣ ಹಾಗೂ ಪದೇ ಪದೇ ಉಂಟಾಗುತ್ತಿದ್ದ ಹಿಮಪಾತದ ನಡುವೆಯೂ ಮಂಜುಗಡ್ಡೆ ಅಡಿ ಸಿಲುಕಿದ್ದ ಸೈನಿಕರನ್ನು ಯಶಸ್ವಿಯಾಗಿ ರಕ್ಷಿಸಿದೆ ಎಂದು ಅವರು ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ನಡೆದ ನಾಲ್ಕನೇ ಘಟನೆ ಇದಾಗಿದೆ. ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಹಿಮಪಾತವಾಗುತ್ತಿದೆ ಎಂದು ಹೇಳಲಾಗಿದೆ.
ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಡಿತಗೊಂಡಿದೆ. ಹಲವು ವಿಮಾನಗಳ ಪ್ರಯಾಣ ಕೂಡ ರದ್ದುಗೊಂಡಿದೆ.