ಕೊಚ್ಚಿ: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರ್ಪಡೆಗೊಳ್ಳಲು ಯತ್ನಿಸುತ್ತಿದ್ದ ಕೇರಳ ಮೂಲದ ಇಬ್ಬರು ಯುವಕರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಕಾಸರಗೋಡು ಜಿಲ್ಲೆ ಮೂಲದ ಅಬ್ದುಲ್ ರಶಿದ್ ಅಬ್ದುಲ್ಲಾ ಹಾಗೂ ಯಾಸ್ಮೀನ್ ಮೊಹಮ್ಮದ್ ಜಹೀದ್ ಬಂಧಿತ ಆರೋಪಿಗಳಾಗಿದ್ದಾರೆಂದು ತಿಳಿದುಬಂದಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 120-ಬಿ ಮತ್ತು 125, 38, 39 ಮತ್ತು 40 ಕಾನೂನು ಬಾಹಿರ ಚಟುವಟಿಕೆಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಅಬ್ದುಲ್ ರಶೀದ್ ಮುಖ್ಯ ಆರೋಪಿಯಾಗಿದ್ದು, ಈತ ಯುವಕರು ಇಸಿಸ್ ಸಂಘಟನೆಗೆ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸುತ್ತಿದ್ದ, ಅಲ್ಲದೆ, ಕುಟುಂಬಸ್ಥರಿಂದ ದೂರಾಗಿದ್ದ ಈತ ಕಾಸರಗೋಡಿನಲ್ಲಿದ್ದುಕೊಂಡೇ ಇಸಿಸ್ ಗೆ ಸೇರ್ಪಡೆಗೊಳ್ಳಲು ಯತ್ನ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ರಶೀದ್ ಉಗ್ರ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಕಾಸರಗೋಡಿನಲ್ಲಿ ತರಗತಿಗಳನ್ನುನಡೆಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.