ಪಂಜಾಬ್: ಪಂಜಾಬ್ ನಲ್ಲಿ ಬಿಜೆಪಿ-ಅಕಾಲಿ ದಳ ಮೈತ್ರಿಗೆ ಮತಗಳನ್ನು ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದಿಂದ ಉಂಟಾಗಬಹುದಾದ ಅಪಾಯವನ್ನು ಉದಾಹರಣೆ ನೀಡಿದ್ದಾರೆ.
ಪಟ್ಟಭದ್ರ ಹಿತಾಸಕ್ತಿಗಳಿಗೆ ಮತ ನೀಡದಂತೆ ರಾಜ್ಯದ ಜನತೆಗೆ ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಂಜಾಬ್ ಗಡಿಯಲ್ಲಿರುವ ರಾಜ್ಯವಾಗಿದ್ದು, ಪಾಕಿಸ್ತಾನ ಪಂಜಾಬ್ ನ್ನು ಅಸ್ಥಿರಗೊಳಿಸುವ ಅವಕಾಶಕ್ಕಾಗಿ ಎದುರುನೋಡುತ್ತಿರುತ್ತದೆ. ಒಂದು ವೇಳೆ ಪಂಜಾಬ್ ನಲ್ಲಿ ಅಸಮರ್ಥ, ಪಟ್ಟಭದ್ರ ಹಿತಾಸಕ್ತಿಗಳ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅದು ಪಂಜಾಬ್ ಹಾಗೂ ದೇಶಕ್ಕೇ ಮಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಪಂಜಾಬ್ ನಲ್ಲಿ ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಸದೃಢ ಸರ್ಕಾರ ಆಯ್ಕೆಯಾಗಬೇಕು, ಆದ್ದರಿಂದ ರಾಜ್ಯದ ಜನತೆ ತಮ್ಮ ಮತಗಳನ್ನು ಎಚ್ಚರಿಕೆಯಿಂದ ಚಲಾಯಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ಮತದಾರರನ್ನು ದಾರಿತಪ್ಪಿಸುವ ಬಗ್ಗೆ ಮೋದಿ ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್ ಪಂಜಾಬ್ ನ ಎಲ್ಲಾ ಯುವಕರನ್ನು ಭಯೋತ್ಪಾದಕರಂತೆ ಬಿಂಬಿಸಿದೆ. ಅಷ್ಟೇ ಅಲ್ಲದೇ ಈಗ ಪಂಜಾಬ್ ನ ಯುವಕರು ಮಾದಕ ವ್ಯಸನಿಗಳೆಂದು ಹೇಳಿದ್ದು, ಪಂಜಾಬ್ ನ್ನು ಕತ್ತಲೆಗೆ ತಳ್ಳುವವರಿಂದ ರಕ್ಷಿಸಬೇಕಿದೆ ಎಂದು ಮೋದಿ ಪಂಜಾಬ್ ನ ಜನತೆಗೆ ಕರೆ ನೀಡಿದ್ದಾರೆ.
ಇದೇ ವೇಳೆ ಪ್ರಚಾರದ ಭರದಲ್ಲಿ ಪಂಜಾಬ್ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರ ವಿರುದ್ಧ ಪ್ರತಿಪಕ್ಷಗಳು ತಪ್ಪು ಪದಗಳನ್ನು ಬಳಸುತ್ತಿರುವುದನ್ನು ಖಂಡಿಸಿದ್ದು, ಪ್ರತಿಪಕ್ಷಗಳ ನಡೆ ನೋವುಂಟುಮಾಡಿದೆ ಎಂದು ಮೋದಿ ಹೇಳಿದ್ದಾರೆ.