ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರದ ಬಗ್ಗೆ ಮಾತನಾಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಅಮೂಲ್ಯ ಆಸ್ತಿ ಇದ್ದಂತೆ ಎಂದು ಬಣ್ಣಿಸಿದ್ದಾರೆ.
ನಾನು ಪ್ರಿಯಾಂಕ ಗಾಂಧಿಗೆ ಹಾಗೂ ಪ್ರಿಯಾಂಕ ಗಾಂಧಿ ನನಗೆ ಪರಸ್ಪರ ಸಹಕಾರಿಯಾಗಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಾರೋ ಇಲ್ಲವೋ ಅದು ಅವರ ಆಯ್ಕೆ, ಆದರೆ ಅವರಂತೂ ಕಾಂಗ್ರೆಸ್ ಪಕ್ಷಕ್ಕೆ ಆಸ್ತಿ ಇದ್ದಂತೆ ಎಂದು ಹೇಳಿದ್ದಾರೆ.
ಫೆ.11 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಲಾಯಂ ಸಿಂಗ್ ಯಾದವ್, ಸೋನಿಯಾ ಗಾಂಧಿ ಪ್ರಚಾರ ಮಾಡಲಿದ್ದಾರಾ ಎಂಬ ಪ್ರಶ್ನೆಗೆ " ಈಗಲೇ ಏನನ್ನೂ ಹೇಳುವುದಿಲ್ಲ" ಎಂದಷ್ಟೇ ತಿಳಿಸಿದ್ದಾರೆ. ಇದೇ ವೇಳೆ ಮಾಯಾವತಿ ನೇತೃತ್ವದ ಬಿಎಸ್ ಪಿ ಬಗ್ಗೆಯೂ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಮಾಯಾವತಿ ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ರಾಜ್ಯದಲ್ಲಿ ಆಡಳಿತ ನಡೆಸಿದಾಗ ಬಿಎಸ್ ಪಿ ಯಿಂದ ಕೆಲವು ತಪ್ಪುಗಳಾಗಿದ್ದರೂ ಅವರ ಬಗ್ಗೆ ಗೌರವವಿದೆ ಎಂದು ಹೇಳಿದ್ದಾರೆ.
ರಾಷ್ಟ್ರಕ್ಕೆ ಅಪಾಯವಿರುವುದು ಬಿಜೆಪಿ ಸಿದ್ಧಾಂತಗಳಿಂದಲೇ ಹೊರತು ಬಿಎಸ್ ಪಿ ಯಿಂದ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.