ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಚಿಲ್ ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ಐವರು ಯೋಧರನ್ನು ರಕ್ಷಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಐವರು ಸೋಮವಾರ ಹುತಾತ್ಮರಾಗಿದ್ದಾರೆ.
ಜನವರಿ 28ರಂದು ಉತ್ತರ ಕಾಶ್ಮೀರದ ಮಚಿಲ್ ನಲ್ಲಿ ಐವರು ಯೋಧರು ಹಿಮದೊಳಗೆ ಸಿಲುಕಿಕೊಂಡಿದ್ದರು. ಕೂಡಲೇ ಕಾರ್ಯಾಚರಣೆ ಆರಂಭಿಸಿದ ಸೇನೆಯ ರಕ್ಷಣಾ ತಂಡ, ವಿಶೇಷ ಉಪಕರಣಗಳನ್ನು ಬಳಸಿ ಅಹಿತಕರ ವಾಕತಾವರಣ ಹಾಗೂ ಪದೇ ಪದೇ ಉಂಟಾಗುತ್ತಿದ್ದ ಹಿಮಪಾತದ ನಡುವೆಯೂ ಮಂಜುಗಡ್ಡೆ ಅಡಿ ಸಿಲುಕಿದ್ದ ಸೈನಿಕರನ್ನು ಯಶಸ್ವಿಯಾಗಿ ರಕ್ಷಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಐವರು ಯೋಧರನ್ನು ಇಂದು ಶ್ರೀನಗರದ ಸೇನಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಎಲ್ಲಾ ಐದು ಯೋಧರಿಗೂ ಲಘು ಉಷ್ಣತೆಯ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಕಳೆದ ಎರಡು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದ ಹವಮಾನದಲ್ಲಿ ಭಾರಿ ಏರುಪೇರಾಗುತ್ತಿದ್ದು, ಭಾರಿ ಪ್ರಮಾಣದ ಹಿಮಪಾತವಾಗುತ್ತಿದೆ. ತಾಪಮಾನ ಕುಸಿತ ಹಾಗೂ ಹಿಮಪಾತಗಳಿಂದಾಗಿ ಗಡಿಯಲ್ಲಿ ಸೈನಿಕರು ಕರ್ತವ್ಯ ನಿರ್ವಹಿಸುವುದೇ ದುಸ್ತರವಾಗಿ ಪರಿಣಮಿಸಿದೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತ ಸಂಭವಿಸಿದ ಪರಿಣಾಮ ಇದವರೆಗೆ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 21 ಯೋಧರು ಹುತಾತ್ಮರಾಗಿದ್ದಾರೆ.