ತಿರುವನಂತಪುರ: ಕೇಂದ್ರ ಮಾಜಿ ಸಚಿವ ಇ. ಅಹಮದ್ ನಿಧನದ ಸುದ್ದಿ ತಿಳಿದಿದ್ದರೂ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದೆ. ಈ ಮೂಲಕ ಇ. ಅಹಮದ್ ಅವರಿಗೆ ಕೇಂದ್ರ ಅಗೌರವವನ್ನು ತೋರಿಸಿದೆ ಎಂದು ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಿನ್ನೆಯಷ್ಟೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸಂಸತ್ತಿನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದುರು. ಈ ವೇಳೆ ಅಹಮದ್ ಅವರು ಕುಸಿದು ಬಿದ್ದಿದ್ದರು. ಅವರ ಸಾವಿನ ಸುದ್ದಿ ತಿಳಿದ ನಂತರವೂ ಕೇಂದ್ರ ಇಂದು ಬಜೆಜ್ ಮಂಡನೆ ಮಾಡಿರುವುದು ಸರಿಯಾದುದಲ್ಲ ಹಾಗೂ ಇದೊಂದು ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.
ನಿಧನ ಸುದ್ದಿ ತಿಳಿದ ಬಳಿಕವೂ ಕೇಂದ್ರ ಬಜೆಟ್ ಮಂಡನೆ ಮಾಡಿರುವುದು ಜನರ ಮನಸ್ಸಿಗೆ ಹಾಗೂ ಭಾವನೆಗಳಿಗೆ ನೋವುಂಟು ಮಾಡಿದಂತಾಗಿದೆ. ಕೇಂದ್ರ ಬಜೆಟ್ ಮಂಡನೆ ಮಾಡುವ ಮೂಲಕ ಇ. ಅಹಮದ್ ಅವರಿಗೆ ಆಗೌರವವನ್ನು ತೋರಿದೆ. ಹಿರಿಯ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬದಲು ಕೇಂದ್ರ ಬಜೆಟ್ ಮಂಡನೆ ಮಾಡುವ ಮೂಲಕ ದೊಡ್ಡ ತಪ್ಪನ್ನು ಮಾಡಿದೆ.
ಅಹಮದ್ ಅವರು ಸಂಸತ್ತಿನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಾಯಕರಾಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ದೇಶದ ಪ್ರತಿನಿಧಯಾಗಿ ವಿಶ್ವಸಂಸ್ಥೆಯಲ್ಲಿ ದೇಶ ಹಿತಾಸಕ್ತಿಗಳನ್ನು ಎತ್ತಿಹಿಡಿದ ವ್ಯಕ್ತಿಯಾಗಿದ್ದರು. ಇಂತಹ ವ್ಯಕ್ತಿಗೆ ಕೇಂದ್ರ ಆಗೌರವವನ್ನು ಸೂಚಿಸಿದೆ ಎಂದು ತಿಳಿಸಿದ್ದಾರೆ.