ನವದೆಹಲಿ: ಖಾಸಗಿ ಸಂಸ್ಥೆಗಳು ಸೇರಿದಂತೆ ಆಧಾರ್ ಕಾರ್ಡುಗಳನ್ನು ನೋಂದಣಿ ಮಾಡುವ ಎಲ್ಲಾ ಕೇಂದ್ರಗಳನ್ನು ಸರ್ಕಾರಿ ಅಥವಾ ಪೌರಾಡಳಿತ ಕಚೇರಿಗಳ ಆವರಣಗಳಿಗೆ ಮುಂದಿನ ಸೆಪ್ಟೆಂಬರ್ ಒಳಗೆ ವರ್ಗಾಯಿಸಬೇಕೆಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.
ಭಾರತದಾದ್ಯಂತ 25,000 ಸಕ್ರಿಯ ಆಧಾರ್ ನೋಂದಣಿ ಕೇಂದ್ರಗಳಿದ್ದು, ಇವೆಲ್ಲವೂ ಅಧಿಕಾರಿಗಳ ನೇರ ಮೇಲ್ವಿಚಾರಣೆಗೆ ಬರುತ್ತದೆ.
ಕೆಲವು ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡು ಮಾಡಿಸಿಕೊಡುವಾಗ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದು ಅದನ್ನು ತಡೆಗಟ್ಟಲು ಈ ಕ್ರಮವಾಗಿದೆ. ಆಧಾರ್ ಕೇಂದ್ರಗಳ ನವೀಕರಣ ಕೂಡ ಸರ್ಕಾರವೇ ಹತ್ತಿರದಿಂದ ಮೇಲ್ವಿಚಾರಣೆ ನಡೆಸಲಿದೆ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಅಜಯ್ ಭೂಷಣ್ ಪಾಂಡೆ, ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಆಧಾರ್ ನೋಂದಣಿಗೆ ಸರ್ಕಾರಿ ಕಚೇರಿಯೊಳಗೆ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಲು ಮತ್ತು ನವೀಕರಣ ಕಾರ್ಯಗಳನ್ನು ಜುಲೈ 31ರೊಳಗೆ ನಿಗದಿಪಡಿಸುವಂತೆ ಸೂಚಿಸಿದ್ದಾರೆ.
ಅಲ್ಲದೆ ಆಧಾರ್ ನೋಂದಣಿ ಕೇಂದ್ರಗಳನ್ನು ವರ್ಗಾಯಿಸುವ ಕಾರ್ಯ ಸಂಪೂರ್ಣವಾಗಿ ಆಗಸ್ಟ್ 31ರೊಳಗೆ ಮುಗಿಯಬೇಕೆಂದು ಪ್ರಾಧಿಕಾರ ತಿಳಿಸಿದೆ.
ಈ ಬಗ್ಗೆ ಪಾಂಡೆಯವರನ್ನು ಸಂಪರ್ಕಿಸಿದಾಗ, ಆಧಾರ್ ನೋಂದಣಿ ಕೇಂದ್ರಗಳನ್ನು ಖಾಸಗಿ ಸ್ಥಳಗಳಿಂದ ಜಿಲ್ಲಾಧಿಕಾರಿ, ಜಿಲ್ಲಾ ಪರಿಷತ್ ಅಥವಾ ಪೌರಾಡಳಿತ ಕಚೇರಿಗಳ ಆವರಣಗಳಿಗೆ ವರ್ಗಾಯಿಸುವುದನ್ನು ಖಚಿತಪಡಿಸಿದರು.
ನೇರ ಮೇಲ್ವಿಚಾರಣೆ ಖಾತರಿಪಡಿಸಬಹುದಾದ ಬ್ಯಾಂಕುಗಳು, ಬ್ಲಾಕ್ ಕಚೇರಿಗಳು, ತಾಲ್ಲೂಕು ಕಛೇರಿಗಳು ಅಥವಾ ಇತರ ಸರಬರಾಜು ಮಾಡುವ ಕಚೇರಿಗಳಲ್ಲಿ ಮರು ಸ್ಥಾಪಿಸಬಹುದೆಂದು ಕೂಡ ಸೂಚಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಹ ಉಪಯೋಗವಾಗಲಿದ್ದು, ನೋಂದಣಿ ಕಚೇರಿ ಸುಲಭವಾಗಿ ಸಿಗಲಿದೆ.
ಆರಂಭದಲ್ಲಿ ಪ್ರತಿ ತಾಲ್ಲೂಕು ಅಥವಾ ಬ್ಲಾಕುಗಳಲ್ಲಿ ಸರ್ಕಾರಿ ಕಚೇರಿಗಳ ಒಳಗೆ ಮೂರು ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಬೇಡಿಕೆಯಿದ್ದು ಅವಶ್ಯಕತೆಯಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳನ್ನು ತೆರೆಯುವ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಗುರುತು ಪ್ರಾಧಿಕಾರದ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಇತ್ತೀಚೆಗೆ ಸರ್ಕಾರದ ಬಹುತೇಕ ಸೌಲಭ್ಯಗಳು ಮತ್ತು ಇತರ ಸೇವೆಗಳು, ಸಬ್ಸಿಡಿ, ಪ್ಯಾನ್, ಜಿಎಸ್ ಟಿ, ಬ್ಯಾಂಕು ಖಾತೆಗಳು, ಪಾಸ್ ಪೋರ್ಟ್, ಆಸ್ತಿ ನೋಂದಣಿ ಇತ್ಯಾದಿಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡು ಬೇಕಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos